ಮೂರ್ತಿ ಪ್ರತಿಷ್ಠಾಪನೆ ತಡೆಯಲು ಯತ್ನಿಸಿದವರಿಗೆ ಗಣೇಶನ ಶಾಪ ತಟ್ಟಿಯೇ ತಟ್ಟುತ್ತದೆ ; ಹಿಂದೂಗಳ ಭಾವನೆ ವಿರೋಧಿಸಿದವರಿಗೆ ಕಪಾಳ ಮೋಕ್ಷವಾಗಿದೆ- ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್
ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿರೋಧಿಸುವವರಿಗೆ ಶಾಪ ತಟ್ಟದೇ ಬಿಡದು. ನಮ್ಮ ಹೋರಾಟಕ್ಕೆ ಕೋರ್ಟ್ ನ್ಯಾಯ ದೊರಕಿಸಿಕೊಟ್ಟಿದೆ. ಹಿಂದೂಗಳ ಭಾವನೆ ವಿರೋಧಿಸಿದವರಿಗೆ ಕಪಾಳ ಮೋಕ್ಷವಾಗಿದೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಈದ್ಗಾ ಮೈದಾನದ ಗಣೇಶ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಐತಿಹಾಸಿಕ ದಿನವಾಗಿದೆ. ನಮ್ಮ ಹೋರಾಟಕ್ಕೆ ಹೈಕೋರ್ಟ್‌ನಿಂದ ನ್ಯಾಯ ಸಿಕ್ಕಿದೆ. ನೀವು ಯಾವುದೇ ಕೋರ್ಟ್ ಗೆ ಹೋಗಿ. ಈಗಾಗಲೇ ಮೂರ್ತಿ ಪ್ರತಿಷ್ಠಾಪನೆ ಆಗಿದೆ. ಯಾವ ಶಕ್ತಿಯೂ ಇದನ್ನ ತಡೆಯೋಕೆ ಸಾಧ್ಯವಿಲ್ಲ ಎಂದರು.
ಗಣೇಶನ ಪ್ರತಿಷ್ಠಾಪನೆ ಮಾಡಲು ವಿರೋಧ ಯಾಕೆ?. ಕೋರ್ಟ್‌ಗೆ ನಮ್ಮ ಭಾವನೆ ಅರ್ಥವಾಗಿದೆ. ಹೋರಾಟಕ್ಕೆ ನ್ಯಾಯ ಕೊಟ್ಟಿದೆ. ಇದನ್ನು ವಿರೋಧಿಸಿದವರಿಗೆ ಕೋರ್ಟ್ ಛೀಮಾರಿ ಹಾಕಿದೆ ಎಂದರು. ಗಣೇಶೋತ್ಸವ ಆರಂಭಿಸಿ 129 ವರ್ಷವಾಗಿದೆ. ಬ್ರಿಟಿಷರು ಕೂಡ ಆಚರಣೆಯನ್ನು ವಿರೋಧಿಸಲಿಲ್ಲ. ಆದರೆ, ಕಾಂಗ್ರೆಸ್ನವರು ನೀಡಿದ ಕುಮ್ಮಕ್ಕಿನಿಂದ ಮುಸ್ಲಿಮರು ಕೋರ್ಟ್ ಮೆಟ್ಟಿಲೇರಿದ್ದಾರೆ. ಸರ್ವಪಾಪ ವಿನಾಶಕನ ಆಚರಣೆಗೆ ಅಡ್ಡಿಪಡಿಸುವವರಿಗೆ ಆ ಗಣೇಶನ ಶಾಪ ತಟ್ಟದೇ ಬಿಡದು ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿನ್ನೆ ಗಣೇಶೋತ್ಸವದಂದು ಕೂಡ ಸುಪ್ರೀಂ ಕೋರ್ಟ್‌ಗೆ ಹೋಗಿ ಮೂರ್ತಿ ಪ್ರತಿಷ್ಠಾಪನೆ ತಡೆಯಲು ಯತ್ನಿಸಿದ್ದಾರೆ. ನಿಮಗೆ ಗಣೇಶನ ಶಾಪ ತಟ್ಟದೆ ಇರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಕೂಡ ಆಚರಣೆಯನ್ನು ವಿರೋಧಿಸಿದ್ದಾರೆ. ನೀವೊಬ್ಬ ಹಿಂದೂ ಆಗಿ ಹಬ್ಬವನ್ನು ವಿರೋಧಿಸುತ್ತೀರಾ ಎಂದು ಪ್ರಶ್ನಿಸಿದ ಅವರು, ನಿಮ್ಮನ್ನು ಜನರು ಚುನಾವಣೆಯಲ್ಲಿ ವಿಸರ್ಜನೆ ಮಾಡುತ್ತಾರೆ. ನಿಮಗೆ ಮತ ಹಾಕದಂತೆ ಪ್ರಚಾರ ಮಾಡುತ್ತೇವೆ ಎಂದು ಕಿಡಿಕಾರಿದರು.
ಮುಸ್ಲಿಂ ಕಿಡಿಗೇಡಿಗಳಿಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ. ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದಿಂದ ಶಫಿ ಆಸಾದ್ನನ್ನು ಸಸ್ಪೆಂಡ್ ಮಾಡಬೇಕು ಎಂದು ಒತ್ತಾಯಿಸಿದರು. ಪೂಜೆ ಸಂದರ್ಭದಲ್ಲಿ ಮುತಾಲಿಕ್ ಅವರು ಸಾವರ್ಕರ್ ಮತ್ತು ಬಾಲಗಂಗಾಧರ ತಿಲಕ್ ಅವರ ಭಾವಚಿತ್ರವನ್ನು ಇಟ್ಟು ಗೌರವ ಸಲ್ಲಿಸಿದರು.