ಮಂಗಳೂರು: ಮೋದಿ ಕಾರ್ಯಕ್ರಮದಲ್ಲಿ ನಳಿನ್ ಕುಮಾರ್ ವಿರುದ್ಧ ಆಕ್ರೋಶಕ್ಕೆ ಸಿದ್ಧತೆ ಹಿನ್ನೆಲೆ!! ಇಬ್ಬರ ವಿರುದ್ಧ ಪ್ರಕರಣ ದಾಖಲು
ಮಂಗಳೂರು:ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಭೇಟಿ ನೀಡಲು ಇನ್ನೇನು ಒಂದೆರಡು ದಿನ ಬಾಕಿ ಇರುವಾಗಲೇ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ಆಕ್ಷೇಪಾರ್ಹ ಬರಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಮೋದಿಯ ಕಾರ್ಯಕ್ರಮದಲ್ಲಿ ನಳಿನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಸಿದ್ಧತೆ ನಡೆಸಿಕೊಂಡ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ನಾಳಿನ ಕಾರ್ಯಕ್ರಮದಲ್ಲಿ ಆಕ್ರೋಶ ವ್ಯಕ್ತಪಡಿಸಲೆಂದೇ ಸಾಮಾಜಿಕ ಜಾಲತಾಣದಲ್ಲಿ ಕೆಲ ಗ್ರೂಪ್ ಗಳನ್ನು ರಚಿಸಿಕೊಂಡು ಅದರಲ್ಲಿ ಹಲವರನ್ನು ಸೇರಿಸಿ ಚರ್ಚೆ ನಡೆಸಲಾಗುತ್ತಿತ್ತು ಎನ್ನಲಾಗಿದ್ದು, ಮಂಗಳೂರು ಸಿಸಿಬಿ ಪೊಲೀಸರ ಹದ್ದಿನ ಕಣ್ಣು ಇಬ್ಬರ ಮೇಲೆ ಪ್ರತ್ಯೇಕ ಪ್ರಕರಣ ದಾಖಲು ಮಾಡುವಂತೆ ಮಾಡಿದೆ.
ಒಂದು ಪ್ರಕರಣದಲ್ಲಿ ನಳಿನ್ ಅವರ ಭಾವಚಿತ್ರವನ್ನು ಮಾರ್ಕ್ ಮಾಡಿ ಹಾಕಿದ್ದು, ಮತ್ತೊಂದರಲ್ಲಿ ಕಾರ್ಯಕ್ರಮದಲ್ಲಿ ಗೊಂದಲ ಉಂಟುಮಾಡಿ, ಆಕ್ರೋಶ ವ್ಯಕ್ತಪಡಿಸಲು ಪ್ರಚೋದಿಸುವ ರೀತಿಯಲ್ಲಿ ಚಿತ್ರೀಕರಣ ಮಾಡಿ ಹರಿಯ ಬಿಡಲಾಗಿತ್ತು. ಕಳೆದ ಒಂದೆರಡು ತಿಂಗಳಿನಿಂದ ಜಿಲ್ಲೆಯಲ್ಲಿ ಅಶಾಂತಿ ನೆಲೆಸಿದ ಪರಿಣಾಮ ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಿ, ರಾತ್ರಿ ಹಗಲೆನ್ನದೆ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸದ್ಯ ಸೆ.02 ರಂದು ಪ್ರಧಾನಿ ಭೇಟಿಯ ವೇಳೆ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸಲು ಪ್ರಚೋದಿಸಲು ಸಾಮಾಜಿಕ ಜಾಲತಾಣದಲ್ಲೇ ಚರ್ಚೆ ನಡೆಸಿದ ಪರಿಣಾಮ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.ಸದ್ಯ ಪ್ರಕರಣ ದಾಖಲಾದ ವ್ಯಕ್ತಿಗಳು ನಾಪತ್ತೆಯಾಗಿದ್ದು,ಉಳಿದ ವಾಟ್ಸಪ್ ಗ್ರೂಪ್ ಅಡ್ಮಿನ್ ಗಳಿಗೆ ನಗರ ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.