ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ಪ್ರಕರಣ | ಮುರುಗಾ ಮಠ ಶ್ರೀಗಳ ಪ್ರಯಾಣ ತಡೆದ ಪೊಲೀಸರು
ಚಿತ್ರದುರ್ಗದ ಮುರುಗಾ ಮಠ ಈಗ ಭಾರೀ ಸುದ್ದಿ ಮಾಡುತ್ತಿದೆ. ಮುರುಗಾ ಮಠದ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಬಂದಿದ್ದು, ಬಾಲಕಿಯರ ಮೇಲೆ ಲೌಂಗಿಕ ದೌರ್ಜನ್ಯ ಆರೋಪದಲ್ಲಿ ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಹಾವೇರಿ ಜಿಲ್ಲೆಯ ಬಂಕಾಪುರದ ಬಳಿಯ ಹೆದ್ದಾರಿಯಲ್ಲಿ ಇಂದು ಪೋಕ್ಸೋ ಕೇಸ್ ಸಂಬಂಧ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಚಿತ್ರದುರ್ಗಕ್ಕೆ ಮರಳುವಂತೆ ಸೂಚಿಸಿದ್ದಾರೆ.
ಈ ಪೋಕ್ಸೋ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿದ್ದಂತ ಮುರುಘಾ ಶ್ರೀ ಅಜ್ಞಾತ ಸ್ಥಳಕ್ಕೆ ತೆರಳೋ ಹಿನ್ನಲೆಯಲ್ಲಿ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಈ ಖಚಿತ ಮಾಹಿತಿಯನ್ನು ಆಧರಿಸಿ, ಹಾವೇರಿ ಪೊಲೀಸರು ಅವರೊಂದಿಗೆ ಚರ್ಚೆ ನಡೆಸಿ ಚಿತ್ರದುರ್ಗಕ್ಕೆ ಮರಳುವಂತೆ ಮನವೊಲಿಸಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಅವರನ್ನು ಕರೆತರಲಾಗುತ್ತದೆ.
‘ಶರಣರನ್ನು ವಶಕ್ಕೆ ಪಡೆದಿದ್ದಾರೆ ಎಂಬುದು ಸುಳ್ಳು. ವಕೀಲರೊಬ್ಬರನ್ನು ಭೇಟಿಯಾಗಲು ಹಾವೇರಿಗೆ ತೆರಳಿದ್ದರು. ಅವರು ಮಧ್ಯಾಹ್ನದ ಹೊತ್ತಿಗೆ ಮಠಕ್ಕೆ ಮರಳಲಿದ್ದಾರೆ’ ಎಂದು ಮಠದ ಸಲಹಾ ಸಮಿತಿ ಸದಸ್ಯ ಆನಂದಪ್ಪ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಶಾಲಾ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಮಠದ ಮೂವರು ಹಾಗೂ ಮೈಸೂರಿನ ಇಬ್ಬರ ವಿರುದ್ಧ ಇಲ್ಲಿನ ನಜರಾಬಾದ್ ಠಾಣೆಯಲ್ಲಿ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ’ (ಪೋಕ್ಸೋ) ಅಡಿ ದೂರು ದಾಖಲಾಗಿತ್ತು.
ಈ ಪ್ರಕರಣದಲ್ಲಿ ಶಿವಮೂರ್ತಿ ಶಿವಾಚಾರ್ಯ ಶರಣರು ಮೊದಲ ಆರೋಪಿಯಾಗಿದ್ದು, ವಾರ್ಡನ್ ಎರಡನೇ ಆರೋಪಿಯಾಗಿದ್ದಾರೆ. ಮಠದ ಬಸವಾದಿತ್ಯ (ಮರಿಸ್ವಾಮಿ) ಮೂರನೇ ಆರೋಪಿ ಮಠದ ಭಕ್ತರೆನ್ನಲಾದ ಮೈಸೂರಿನ ಪರಮಶಿವಯ್ಯ ಮತ್ತು ವಕೀಲ ಗಂಗಾಧರಯ್ಯ ಕ್ರಮವಾಗಿ ನಾಲ್ಕು ಮತ್ತು ಐದನೇ ಆರೋಪಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಸಿ.ಚಂದ್ರಕುಮಾರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು.
‘ಇಬ್ಬರು ವಿದ್ಯಾರ್ಥಿನಿಯರ ಪೈಕಿ ಒಬ್ಬರನ್ನು ಶರಣರು ಮೂರೂವರೆ ವರ್ಷಗಳಿಂದ, ಮತ್ತೊಬ್ಬರನ್ನು ಒಂದೂವರೆ ವರ್ಷದಿಂದ ಲೈಂಗಿಕವಾಗಿ ದೌರ್ಜನ್ಯ ಮಾಡುತ್ತಿರುವುದಾಗಿ, ಅದಕ್ಕೆ ಉಳಿದ ಆರೋಪಿಗಳು ಸಹಕರಿಸಿರುವುದಾಗಿ ವಿದ್ಯಾರ್ಥಿನಿಯರು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಆಪ್ತಸಮಾಲೋಚನೆ ಸಮಯದಲ್ಲಿ ಹೇಳಿಕೆ ನೀಡಿದ್ದಾರೆ.
ಚಿತ್ರದುರ್ಗದ ಮುರುಘಾ ಮಠದ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಶ್ರೀಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಶ್ರೀಗಳ ಲೈಂಗಿಕ ಕಿರುಕುಳದಿಂದ ಬೇಸತ್ತ ಮಕ್ಕಳು ರಾಜಧಾನಿ ಬೆಂಗಳೂರಿಗೆ ಬಂದು ಅಲ್ಲಿ ದೂರು ದಾಖಲಿಸಲು ಪ್ರಯತ್ನ ಮಾಡಿದ್ದಾರೆ. ಅದು ಸಾಧ್ಯವಾಗದಿದ್ದಾಗ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ ಒಬ್ಬರು ಆಟೋ ಚಾಲಕ ಅವರಿಗೆ ಸಹಾಯ ಮಾಡಿ, ಮೈಸೂರಿನ ಒಡನಾಡಿ ಸಂಸ್ಥೆ ಮೂಲಕ ಇದೀಗ ದೂರು ದಾಖಲಿಸಿದ್ದಾರೆ.
ಒಡನಾಡಿ ಸಂಸ್ಥೆಯ ಬಳಿ ಹೋಗಿ ನ್ಯಾಯ ಸಿಗುತ್ತದೆ ಎಂದು ಆಟೋ ಚಾಲಕರು ಕಳುಹಿಸಿಕೊಟ್ಟರು ಎಂದು ಒಡನಾಡಿ ಸಂಸ್ಥೆ ಮಾಹಿತಿ ನೀಡಿದೆ. ಆ ಇಬ್ಬರು ಮಕ್ಕಳ ಜೊತೆ ಆಪ್ತ ಸಮಾಲೋಚನೆ ಮಾಡಲಾಗಿದೆ. ಮಕ್ಕಳ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂದೆನಿಸಿದ ನಂತರ ನಿನ್ನೆ ರಾತ್ರಿ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ ಎಂದು ಒಡನಾಡಿ ಸಂಸ್ಥೆ ಹೇಳಿತ್ತು.