1,200 ಕೋಟಿಯ ದೈತ್ಯ ಅವಳಿ ಕಟ್ಟಡ ಕೇವಲ 10 ಸೆಕೆಂಡ್ ನಲ್ಲಿ ಪುಡಿ ಪುಡೀಸ್, ಇಂಥಹಾ ಕಟ್ಟಡ ಕೆಡವಿದ್ದು ಯಾಕೆ ಗೊತ್ತಾ ?

ಇಂದು ಭಾನುವಾರ, ಭಾರೀ ಕುತೂಹಲ ಕೆರಳಿಸಿದ್ದ ನೋಯ್ಡಾದ ಅವಳಿ ಕಟ್ಟಡಗಳ ನೆಲಸಮ ಕಾರ್ಯಾಚರಣೆ ಸಂಪೂರ್ಣಗೊಂಡಿದೆ. 100 ಮೀಟರ್ ಎತ್ತರದ ಎರಡು ಬೃಹತ್ ಕಟ್ಟಡಗಳು 9 ಸೆಕೆಂಡುಗಳ ಒಳಗೆ ನೋಡ ನೋಡುತ್ತಿದ್ದಂತೆ ಧೂಳಾಗಿ ಮಾರ್ಪಾಡಾಗಿದೆ‌. ಭ್ರಷ್ಟ ಅಧಿಕಾರಿಗಳಿಗೆ ಇದೊಂದು ಸ್ಪಷ್ಟ ಸಂದೇಶ ಎಂದೇ ಹೇಳಬಹುದು.

 

ಸೂಪರ್ಟೆಕ್ ಸಂಸ್ಥೆ ನಿರ್ಮಿಸಿದ್ದ ಈ ಕಟ್ಟಡ ವಿವಾದಗಳಿಂದಲೇ ಕೂಡಿತ್ತು. ಹಾಗಾಗಿ, ಈ ಟ್ವಿನ್ ಟವರ್ಸ್ ಅನ್ನು ಕೆಡವಲು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ನಿಯಮಗಳನ್ನು ಉಲ್ಲಂಘನೆ ಮಾಡಿ ನಿರ್ಮಿಸಿದ ಕಟ್ಟಡ ಇದಾಗಿರುವುದರಿಂದ, ಧ್ವಂಸ ಮಾಡಲು ಸೂಚನೆ ನೀಡಿದ ಹಿನ್ನಲೆ ಕಳೆದೊಂದು ವಾರದಿಂದ ಕಟ್ಟಡ ಕೆಡವಲು ತಯಾರಿ ಮಾಡಿಕೊಳ್ಳಲಾಗಿತ್ತು.

ಒಟ್ಟಿನಲ್ಲಿ 1,200 ಕೋಟಿ ರೂ.ಗೂ ಅಧಿಕ ಹಣ ಖರ್ಚು ಮಾಡಿ 7.5 ಲಕ್ಷ ಚದರ ಅಡಿಯಲ್ಲಿ ನಿರ್ಮಾಣ ಮಾಡಲಾದ ದೆಹಲಿಯ ಕುತುಬ್‌ಮಿನಾರ್‌ಗಿಂತಲೂ ಎತ್ತರದಲ್ಲಿರುವ ಈ ಟವರ್ ಅನ್ನು 20 ಕೋಟಿ ರೂ. ಖರ್ಚು ಮಾಡಿ ಇದೀಗ ಕೆಡವಲಾಗಿದೆ.

ಎಡಿಫೈಸ್ ಎಂಜಿನಿಯರಿಂಗ್ ಎಂಬ ಸಂಸ್ಥೆ ಈ ಕಟ್ಟಡ ಧ್ವಂಸದ ಹೊಣೆ ಹೊತ್ತಿದ್ದು, 100 ಕೋಟಿ ವಿಮೆ ಮಾಡಿಸಿದೆ. ಹರಿಯಾಣದ ಹಿಸ್ಸಾರ್‌ನ ಬ್ಲಾಸ್ಟಿಂಗ್ ತಜ್ಞ ಚೇತನ್ ದತ್ತಾ 100 ಮೀ. ದೂರದಿಂದ ಬ್ಲಾಸ್ಟ್‌ಗೆ ಸ್ವಿಚ್ ಒತ್ತಿದ್ದಾರೆ.

ಭಾನುವಾರ ಮಧ್ಯಾಹ್ನ 2.30ಕ್ಕೆ ಅವಳಿ ಕಟ್ಟಡಗಳಲ್ಲಿನ ಅಂತಸ್ತುಗಳ ಪಿಲ್ಲರ್‌ಗಳ ಒಳಗೆ ಹುದುಗಿಸಲಾಗಿದ್ದ ಸ್ಫೋಟಕಗಳು ಒಮ್ಮೆಲೇ ಸ್ಫೋಟಿಸಿ, ಎರಡೂ ಕಟ್ಟಡ ಧರಾಶಾಹಿಯಾಗಿದೆ. ಈ ಮೂಲಕ ಕಾರ್ಯಾಚರಣೆಯ ಯೋಜನೆ ಯಶಸ್ವಿಯಾಗಿದೆ. ಕಟ್ಟಡಗಳು ಬೀಳುವಾಗ ವಾಲಿದ್ದರೆ ಅಕ್ಕಪಕ್ಕದ ಕಟ್ಟಡಗಳಿಗೆ ಭಾರಿ ಹಾನಿಯಾಗುವ ಅಪಾಯವಿತ್ತು. ಹಲವು ಮೀಟರ್ ವರೆಗೆ ಸ್ಫೋಟದ ತೀವ್ರತೆಯಾಗಿದೆ. ಏಕೆಂದರೆ ಹಲವು ಮೀಟರ್‌ಗಳಷ್ಟು ದೂರವರೆಗೂ ನೆಲ ಕಂಪಿಸಿದೆ. ಆದರೆ ಮೊದಲೇ ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿ ಉಂಟಾಗದಂತೆ ಸೂಕ್ತ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿತ್ತು.

ಕಟ್ಟಡದ ಕಂಬಗಳಲ್ಲಿ ಸುಮಾರು 7,000 ರಂಧ್ರಗಳನ್ನು ಮಾಡಿ, 3,700 ಕೆ.ಜಿ ಸ್ಫೋಟಕಗಳನ್ನು ಬಳಸಲಾಗಿದೆ. ಕಟ್ಟಡ ಧ್ವಂಸಕ್ಕೆ 70,000 ಸರ್ಕ್ಯೂಟ್‌ಗಳನ್ನೂ ಹೊಂದಿಸಲಾಗಿದೆ. ಇದೀಗ ಧ್ವಂಸಗೊಂಡ ಕಟ್ಟಡದ ಅವಶೇಷ ಸುಮಾರು 55,000 ಟನ್‌ಗಳಷ್ಟು ಆಗಿದ್ದು, ಅದನ್ನು ತೆರವುಗೊಳಿಸಲು 3 ತಿಂಗಳು ತೆಗೆದುಕೊಳ್ಳಬಹುದು ಎಂದು ಎಂಜಿನಿಯರುಗಳು ತಿಳಿಸಿದ್ದಾರೆ. ಅವಶೇಷಗಳನ್ನು ಸಂಗ್ರಹಿಸಲು ಈಗಾಗಲೇ ಪ್ರದೇಶವನ್ನು ಗೊತ್ತುಪಡಿಸಲಾಗಿದೆ.

Leave A Reply

Your email address will not be published.