ಇಂದು ಕೇವಲ 15 ಸೆಕೆಂಡುಗಳಲ್ಲಿ ನೆಲಸಮವಾಗಲಿವೆ ಅವಳಿ ಗಗನಚುಂಬಿ ಕಟ್ಟಡಗಳು, ಆ ದೃಶ್ಯ ನೋಡಲು ಸುತ್ತಮುತ್ತಲ ಅಪಾರ್ಟ್ಮೆಂಟ್ ಗಳ ತುಂಬಾ ತುಂಬಿಕೊಂಡ ನೆಂಟರಿಷ್ಟರು !!
ನೋಯ್ಡಾ: ಇಲ್ಲಿ ಅಕ್ರಮವಾಗಿ ನಿರ್ಮಿಸಿರುವ ಸೂಪರ್ಟೆಕ್ನ ಬಹು ಅಂತಸ್ತಿನ ಅವಳಿ ಕಟ್ಟಡಗಳನ್ನು ಇಂದು ಮಧ್ಯಾಹ್ನ ನೆಲಸಮಗೊಳಿಸಲು ಬೇಕಾಗಿರುವ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ.100 ಮೀಟರ್ ಎತ್ತರದ ಅವಳಿ ಕಟ್ಟಡಗಳನ್ನು ಸುಪ್ರೀಂ ಕೋರ್ಟ್ ಆದೇಶದಂತೆ ನೆಲಸಮಗೊಳಿಸಲಾಗುತ್ತದೆ. 70 ಕೋಟಿ ರೂಪಾಯಿ ಖರ್ಚುಮಾಡಿ ಕಟ್ಟಿದ ಬೃಹತ್ ಕಟ್ಟಡ ಇಂದು ಕೇವಲ 15 ಸೆಕೆಂಡುಗಳ ಒಳಗೆ ಮಣ್ಣು ಗುಡ್ಡೆ ಆಗಲಿದೆ. ಸಿವಿಲ್ ಪರಿಭಾಷೆಯಲ್ಲಿ ಕುಸಿತದ ನಂತರ ಆ ಕಟ್ಟಡದ ಅವಶೇಷಗಳನ್ನು ಡೆಬ್ರಿಸ್ ಎನ್ನಲಿದ್ದಾರೆ ಜನ.
ಎಮರಾಲ್ಡ್ ಕೋರ್ಟ್ ಸೊಸೈಟಿ ಆವರಣದಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ನೆಲಸಮಗೊಳಿಸಲು 3,700 ಕೆ.ಜಿ ಸ್ಫೋಟಕಗಳನ್ನು ಬಳಸಲಾಗುತ್ತದೆ. ಸೆಕ್ಟರ್ 93ಎನಲ್ಲಿರುವ ಎಮರಾಲ್ಡ್ ಕೋರ್ಟ್ ಮತ್ತು ಹತ್ತಿರದ ಎಟಿಎಸ್ ವಿಲೇಜ್ ಸೊಸೈಟಿಗಳ ಸುಮಾರು 5,000 ನಿವಾಸಿಗಳು ಭಾನುವಾರ ಬೆಳಿಗ್ಗೆ 7 ಗಂಟೆಯೊಳಗೆ ಆವರಣ ಖಾಲಿ ಮಾಡುವಂತೆ ಸೂಚಿಸಲಾಗಿದೆ.
ಈ ಪೈಕಿ ಅನೇಕ ಮಂದಿ ಶನಿವಾರವೇ ಸ್ಥಳಾಂತರಗೊಂಡಿದ್ದಾರೆ. ಸುಮಾರು 3,000 ವಾಹನಗಳನ್ನು ತೆರವುಗೊಳಿಸಲಾಗುತ್ತಿದ್ದು, 200 ರಷ್ಟು ಸಾಕುಪ್ರಾಣಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.
ದೆಹಲಿಯ ಇತಿಹಾಸ ಪ್ರಸಿದ್ಧ ಕುತುಬ್ ಮಿನಾರ್ಗಿಂತಲೂ ಎತ್ತರವಾದ ಈ ಕಟ್ಟಡಗಳನ್ನು ಕೇವಲ 15 ಸೆಕೆಂಡುಗಿಂತಲೂ ಕಡಿಮೆ ಅವಧಿಯಲ್ಲಿ ವಾಟರ್ಫಾಲ್ ಇಂಪ್ಲೋಷನ್ ತಂತ್ರಜ್ಞಾನದ ಮೂಲಕ ನೆಲಸಮ ಮಾಡಲಾಗುತ್ತದೆ.
ಭಾರತದಲ್ಲಿ ನೆಲಸಮವಾಗಲಿರುವ ಅತ್ಯಂತ ಎತ್ತರದ ಕಟ್ಟಡ ಇದಾಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಕುತೂಹಲ ಎಷ್ಟೊಂದು ಮನೆ ಮಾಡಿದೆಯೆಂದರೆ ಶನಿವಾರ ಮಧ್ಯರಾತ್ರಿಯವರೆಗೂ ಹಲವಾರು ಮಂದಿ ಕಟ್ಟಡದ ಮುಂಭಾಗದಲ್ಲಿ ಸೆಲ್ಫಿ ಕ್ಲಿಕ್ಕಿಸಿ ವಿಡಿಯೊ ತೆಗೆದುಕೊಳ್ಳುತ್ತಿರುವ ದೃಶ್ಯ ಕಂಡುಬಂದಿತ್ತು. ಅಷ್ಟೆ ಅಲ್ಲ, ಕಟ್ಟಡ ಬೀಳುವ ದೃಶ್ಯವನ್ನು ತುಂಬಿಸಿೊಳ್ಳಲೆಂದೆ ಅಕ್ಕ ಪಕ್ಕದ ಪ್ಲಾಟ್ ಗಳು ಅಪಾರ್ಟ್ಮೆಂಟ್ ಗಳು ಎಲ್ಲವೂ ಈಗ ತುಂಬಿ ತುಳುಕುತ್ತಿವೆಯಂತೆ. ಆ ಅವಳಿ ಕಟ್ಟಡದ ಆಸು ಪಾಸಿನಲ್ಲಿರುವ ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುತ್ತಿರುವ ಜನರ ನೆಂಟರಿಷ್ಟರು ಮತ್ತು ಗೆಳೆಯರೆಲ್ಲ ಈಗ ಆಯಾ ಗೆಳೆಯರ ಆ ಅಪಾರ್ಟ್ಮೆಂಟ್ ಗಳಿಗೆ ಬಂದು ಮೊಕ್ಕಾಂ ಹೂಡಿದ್ದಾರೆ. ‘ಕೆಡವುವ ಮತ್ತು ಬೀಳುವ ಗಮ್ಮತ್ತನ್ನು ಆನಂದಿಸುವ ನಿಟ್ಟಿನಲ್ಲಿ ಅವರೆಲ್ಲ ಅಲ್ಲಿ ಸೇರಿಕೊಂಡಿದ್ದಾರೆ. ಹಾಗೆ ಆನಂದಿಸುವ ಜನರಿಗಾಗಿ ಅಪಾರ್ಟ್ಮೆಂಟ್ ಗಳಲ್ಲಿ ಪಾರ್ಟಿ ಕೂಡ ಅರೆಂಜ್ ಆಗಿದೆಯಂತೆ. ಜ್ಯೂಸ್ ಹೀರುತ್ತಾ? ಚಿಪ್ಸ್ ಮೆಲ್ಲುತ್ತಾ ಕೇವಲ ಸೆಕೆಂಡುಗಳಲ್ಲಿ ಧರಶಾಹಿಯಾಗುವ ಗಗನಚುಂಬಿ ಕಟ್ಟಡಗಳ ದೃಶ್ಯವನ್ನು ಕಣ್ತುಂಬಿಕೊಳ್ಳಲು ಅವರಿಲ್ಲ ಅಲ್ಲಿ ಸೇರಿದ್ದಾರೆ.
ಅತ್ತ, ಇಂದು ಭಾನುವಾರ ಮಧ್ಯಾಹ್ನ ಬಹು ಅಂತಸ್ತಿನ ಅವಳಿ ಕಟ್ಟಡಗಳನ್ನು ಸುರಕ್ಷಿತವಾಗಿ ನೆಲಸಮಗೊಳಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ನೋಯ್ಡಾ ಪ್ರಾಧಿಕಾರದ ಸಿಇಎ ರಿತು ಮಹೇಶ್ವರಿ ತಿಳಿಸಿದ್ದಾರೆ.
ಅವಳಿ ಕಟ್ಟಡಗಳ ಹತ್ತಿರದಲ್ಲೇ ಅಂದರೆ ಕೇವಲ ಒಂಬತ್ತು ಮೀಟರ್ ದೂರದಲ್ಲಿ ಆಸ್ಟರ್ 2 ಹಾಗೂ ಆಸ್ಟರ್ 3 ಎಂಬ ಹೆಸರಿನ ಕಟ್ಟಡಗಳಿವೆ. ಆದರೆ ಸಮೀಪದ ಕಟ್ಟಡದ ರಚನೆಗೆ ಯಾವುದೇ ರೀತಿಯ ಹಾನಿಯಾಗದಂತೆ ವರ್ಟಿಕಲ್ ಫಾಲ್ ಉಂಟಾಗಲಿದೆ. ಹಾಗಾಗಿ ಈ ಕಟ್ಟಡದ ನೆಲಸಮ ಪ್ರಕ್ರಿಯೆಯಿಂದ ಆಸುಪಾಸಿನ ಯಾವುದೇ ಕಟ್ಟಡಗಳಿಗೆ ಹಾನಿ ಉಂಟಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಮೀಪದಲ್ಲಿರುವ ನೋಯ್ಡಾ-ಗ್ರೇಟರ್ ಎಕ್ಸ್ಪ್ರೆಸ್ವೇಯಲ್ಲಿ ಮಧ್ನಾಹ್ನ 2.15 ರಿಂದ 2.45 ರ ವರೆಗೆ ವಾಹನ ಸಂಚಾರ ಸ್ಥಗಿತಗೊಳಿಸಲಾಗುತ್ತದೆ. ಈ ಅವಧಿಯಲ್ಲಿ ಡ್ರೋನ್ ಹಾರಾಟವನ್ನು ನಿಷೇಧಿಸಲಾಗಿದೆ. ಒಂದು ನಾಟಿಕಲ್ ಮೈಲ್ ಪ್ರದೇಶದಲ್ಲಿ ವಾಯು ಮಾರ್ಗದಲ್ಲೂ ವಿಮಾನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಪೊಲೀಸರಿಂದ ಕ್ಲಿಯರನ್ಸ್ ದೊರಕಿದ ಬಳಿಕ ಕೇವಲ ಕೆಲವೇ ಸೆಕೆಂಡುಗಳ ಕೆಲಸ. ಕೇವಲ ಒಂದು ಬಟನ್ ಅದುಮಿದರೆ ಸಾಕು, ಕಟ್ಟಡ ಅದುರಿ ಬಿದ್ದು ಡಮ ಡಮ ಕೆಳಕ್ಕೆ ಕುಸಿದು ಬೀಳುತ್ತದೆ. ಮೂವರು ವಿದೇಶಿ ತಜ್ಞರು, ಭಾರತದ ತಜ್ಞ ಚೇತನ್ ದತ್ತಾ ಮತ್ತು ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಆರು ಜನರು ಮಾತ್ರ ಸ್ಥಳದಲ್ಲಿರಲಿದ್ದಾರೆ. ಉಳಿದಂತೆ ಆ ಪ್ರದೇಶದಲ್ಲಿ ಸ್ಮಶಾನ ಮೌನ ಆವರಿಸಿದೆ. ಈ ಹಿಂದೆ ಕೇರಳದ ಕೊಚ್ಚಿಯ ಮಾರಡ್ನಲ್ಲಿ ಇದಕ್ಕೆ ಸಮಾನವಾಗಿ ಬಹುಮಹಡಿಯ ಕಟ್ಟಡವನ್ನು ನೆಲಸಮಗೊಳಿಸಲಾಗಿತ್ತು ಎಂಬುದನ್ನು ಇಲ್ಲಿ ನಾವು ಸ್ಮರಿಸಬಹುದು.