‘ಕಲಕುಂಡಿ’ ಗೆ ಚೀಟಿ ಹರಿದು ಅಪಹಾಸ್ಯಕ್ಕೆ ಗುರಿಯಾದ ಕೆಎಸ್ಸಾರ್ಟಿಸಿ, ನಾಟಿ ಕೋಳಿಗೆ ಟಿಕೆಟ್ ಕೊಟ್ಟ ತಂಡದಿಂದ ಇನ್ನೊಂದು ಸಾಧನೆ !
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಬಸ್ ವೊಂದರಲ್ಲಿ ಊರಿನ ಹೆಸರನ್ನೇ ತಪ್ಪಾಗಿ ಮುದ್ರಿಸಿ ಇದೀಗ ಅಪಹಾಸ್ಯಕ್ಕೆ ಗುರಿಯಾಗಿದೆ. ಕೆಎಸ್‌ಆರ್‌ಟಿಸಿ ಯಿಂದ ಮುದ್ರಿತಗೊಂಡ ಟಿಕೆಟ್‌ನಲ್ಲಿಯೇ ಕನ್ನಡದ ಕಗ್ಗೋಲೆ ನಡೆದಿದೆ. ಅದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡದಾಗಿ ಟ್ರೊಲ್ ಆಗುತ್ತಿದ್ದು ತಮಾಷೆಗೆ ಹೊಸ ಸಬ್ಜೆಕ್ಟ್ ಅನ್ನು ಒದಗಿಸಿದೆ. ಕಾರಣ ಅದು ಪ್ರಿಂಟ್ ಮಾಡಿದ ಊರಿನ ಹೆಸರು !
ದಕ್ಷಿಣ ಕನ್ನಡ ಜಿಲ್ಲೆಯ, ಮಡಿಕೇರಿ ಹೋಗುವ ರಸ್ತೆಯ ಊರು ಕಲ್ಲುಗುಂಡಿ. ಆ ಹೆಸರನ್ನು ‘ಕಲಕುಂಡಿ’ ಎಂದು ಕೆಟ್ಟದಾಗಿ ಬರೆದು ಅವಮಾನ ಮಾಡಲಾಗಿದೆ. ಈ ಕುರಿತ ಟಿಕೆಟ್ ವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದ್ದು ಕೆಎಸ್‌ಆರ್‌ಟಿಸಿ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇಂತಹ ಮಹಾ ಎಡವಟ್ಟು ಆಗಿರುವುದು ಕೊಳ್ಳೇಗಾಲ ಘಟಕಕ್ಕೆ ಸೇರಿದ ಕೆಂಪು ಬಸ್ ನಲ್ಲಿ ಆಗಿದೆ ಎಂದು ತಿಳಿದು ಬಂದಿದೆ.
ಪ್ರಯಾಣಿಕರೊಬ್ಬರು ಕಲ್ಲುಗುಂಡಿಯಿಂದ ಹತ್ತಿ ಮಡಿಕೇರಿಗೆ ಟಿಕೆಟ್ ತೆಗೆದುಕೊಂಡಿದ್ದಾರೆ. ಟಿಕೆಟ್ ನೋಡಿದ ಪ್ರಯಾಣಿಕರಿಗೆ ಶಾಕ್ ಆಗಿದೆ. ಏಕೆಂದರೆ ಅದರಲ್ಲಿ ಕಲಕುಂಡಿಗೆ ಟಿಕೆಟ್ ನೀಡಲಾಗಿದೆ. ಇಂತಹ ತಪ್ಪುಗಳನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ನೋಡ್ರಾಪಾ , ಮಂದಿಗೆ ಮಾತ್ರವಲ್ಲ, ‘ ಕುಂಡಿ ‘ ಗೆ ಕೂಡಾ ಟಿಕೇಟ್ ಹರಿಯತ್ತೋ ಕೆಎಸ್ಸಾರ್ಟಿಸಿ ” ಎಂದು ಜಾಲತಾಣದಲ್ಲಿ ಹುಯಿಲು ಎಬ್ಬಿಸಲಾಗುತ್ತಿದೆ. ಈ ಹಿಂದೆ ನಾಟಿ ಕೋಳಿಗೆ ಟಿಕೇಟ್ ಹರಿದಿದ್ದ ಕೆಎಸ್ಸಾರ್ಟಿಸಿ ಈ ಬಾರಿ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದೆ.