ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ವಿದ್ಯಾರ್ಥಿನಿಯರ ಕಾಲಿಗೆ ಬಿದ್ದು ಮತ ಬೇಡಿದ ಯುವಕ, Viral Video
ಚುನಾವಣೆಗಳು ಬಂದಾಗ ರಾಜಕಾರಣಿಗಳು ಬಿಟ್ಟಿ ಆಶ್ವಾಸನೆಗಳನ್ನು ಕೊಟ್ಟು ಜನ ಮನ ಗೆಲ್ಲಲು ಓಟಿಗಾಗಿ ಹರಸಾಹಸ ಪಡುವುದು ಸರ್ವೇ ಸಾಮಾನ್ಯ. ಹೆಂಗಸರಿಗೆ ಸೀರೆ ದಾನ ಮಾಡಿ ಅವರ ಮನವೊಲಿಕೆಯ ಪ್ರಯತ್ನ ನಡೆಸಿದರೆ, ವಿಲಾಸಿ ಪುರುಷರಿಗೆ ಹೆಂಡದ ಹೊಳೆ ಹರಿಸಿ ಕುಡಿತದ ದಾಸರನ್ನಾಗಿಸಿ ಓಟಿಗಾಗಿ ಜನರನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ಮೆರೆದಾಡುವ ರಾಜಕಾರಣಿಗಳು ಅಧಿಕಾರಕ್ಕಾಗಿ ಮಾಡುವ ನಾಟಕಗಳಿಗೆ ಲೆಕ್ಕವಿಲ್ಲ. ಅಧಿಕಾರದ ವ್ಯಾಮೋಹದಿಂದ ಬಾಡೂಟದ ವ್ಯವಸ್ಥೆ ಮಾಡಿ, ಕಾಣದ ಕೈಗಳಲ್ಲಿ ಲಕ್ಷ್ಮಿ ಹರಿದಾಡಿ ಬೆಚ್ಚಗೆ ಜೇಬಿಗೆ ಸೇರಿ ಸರ್ಕಾರ ಬೊಕ್ಕಸದಲ್ಲಿ ಕೋಟಿಗಟ್ಟಲೆ ದುಂದು ವೆಚ್ಚದಿಂದ ಖಾಲಿಯಾದರೂ ಪ್ರಶ್ನಿಸುವವರಿಲ್ಲ.
ಈಗ ವಿದ್ಯಾದಾನ ಮಾಡುವ ಕಾಲೇಜ್ ನಲ್ಲೂ ಕೂಡ ಚುನಾವಣೆಯ ಗಾಳಿ ಬಿರುಸಾಗಿ ಬೀಸಿ ಯುವಕರ ಚಿತ್ತ ಕೂಡ ಅಧಿಕಾರ ಹಿಡಿಯಲು ಏನು ಬೇಕಾದರೂ ಮಾಡುವ ಶೋಚನೀಯ ವ್ಯವಸ್ಥೆ ಎದುರಾಗಿದೆ.
ರಾಜಸ್ಥಾನದ ಕಾಲೇಜ್ ಒಂದರಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯ ಸ್ಪರ್ಧಿಯೊಬ್ಬ ಕಾಲೇಜ್ ಯುವತಿಯರ ಕಾಲು ಹಿಡಿದು ಮತ ನೀಡಲು ಮನವಿ ಮಾಡಿಕೊಳ್ಳುತ್ತಿದ್ದ ದೃಶ್ಯ ನೋಡಿದವರಿಗೆ ಹಾಸ್ಯಾಸ್ಪದ ಎನಿಸಿದರೂ, ಓಟಿಗಾಗಿ ರಾಜಕಾರಣಿಗಳು ಮಾತ್ರವಲ್ಲ ವಿದ್ಯಾರ್ಥಿಗಳು ಕೂಡ ಏನು ಬೇಕಾದರೂ ಮಾಡಬಲ್ಲರು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಆತ ಮತದಾನಕ್ಕೂ ಮುನ್ನ ರಸ್ತೆಯಲ್ಲೇ ಯುವತಿಯರನ್ನ ತಡೆದು ನಿಲ್ಲಿಸಿ ಅವರ ಕಾಲಿಗೆ ಬೀಳುತ್ತಾ ನನಗೆ ವೋಟು ಕೊಡಿ ಎಂದು ಅಂಗಲಾಚಿದ್ದಾನೆ. ಯುವಕ ಕಾಲಿಗೆ ಬೀಳುತ್ತಿರುವುದಕ್ಕೆ ಯುವತಿಯರು ನಾಚಿ ನೀರಾಗಿದ್ದರು. ಹೀಗೆಲ್ಲಾ ಮಾಡ್ಬೇಡಿ ಎನ್ನುತ್ತಾ ಕಾಲ್ಕಿತ್ತಿದ್ದರು.
ಸದ್ಯ ಯುವಕ ಕಾಲಿಗೆ ಬೀದಿದ್ದ ವೀಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಲ್ಲಿ ಓಟಿಗೆ ನಿಂತ ಭಾವೀ ನಾಯಕನೊಬ್ಬ ನಾಟಕೀಯವಾಗಿ ಹೆಣ್ಣು ಮಕ್ಕಳ ಕಾಲು ಹಿಡಿದರೆ ಅವರು ಭಾವನಾತ್ಮಕವಾಗಿ ಕರಗುವರೆಂಬ ಯೋಚನೆಯಿಂದ ವಿದ್ಯಾರ್ಥಿನಿಯರ ಕಾಲು ಹಿಡಿಯಲು ನಡುಬಗ್ಗಿಸಿದ್ದಾನೆ. ಹಾಗೆ ಯುವತಿಯರು ಕಾಲು ಹಿಡಿದ ಸ್ಪರ್ಧಿಗೆ ಅನುಕಂಪದಿಂದ ಓಟು ಹಾಕುವುದೋ ಬೇಡವೋ ಎಂಬ ಇಬ್ಬಂದಿ ದ್ವಂದ್ವದಲ್ಲಿ ಅಲ್ಲಿನ ವಿದ್ಯಾರ್ಥಿನಿಯರು ಒದ್ದಾಡುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದ್ದ ಯುವಕನೊಬ್ಬ ರಸ್ತೆಯಲ್ಲಿ ಯುವತಿಯರ ಕಾಲು ಹಿಡಿದು ಓಟಿಗಾಗಿ ಮನವಿ ಮಾಡುವ ದೃಶ್ಯದ ವಿಡಿಯೋ ಈಗ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಭಾವೀ ನೇತಾರನನ್ನು ನೋಡಿ ಮುಂದೊಂದು ದಿನ ರಾಜಕಾರಣಿಗಳು ಕೂಡಾ ಕಂಡ ಕಂಡವರ ಕಾಲಡಿಗೆ ಬಗ್ಗಿದರೂ ಅಚ್ಚರಿ ಇಲ್ಲ.