ಆಡುತ್ತಿದ್ದ ಕಂದ ಕೆಳಕ್ಕೆ ಬಿದ್ದು ದಾರುಣ ಸಾವು | ಅಂಗಾಂಗ ದಾನ ಮಾಡಿದ ಪೋಷಕರು
ಮನೆಯ ಪ್ರೀತಿಯ ಪುಟ್ಟ ಮಗು ಅದು, ಈಗಷ್ಟೇ ಅಂಬೆಗಾಲಿಡುತ್ತಿದ್ದ ಆ ಪುಟ್ಟ ಮಗುವಿನ ಕಿಲಕಿಲ ನಗು ಈಗ ಕೇಳಿಸ್ತಾ ಇಲ್ಲ. ಅಲ್ಲೋ ಇಲ್ಲೋ ಒಂದು ಮೂಲೆಯಲ್ಲಿ ಕೇಳಿಸುತ್ತಿದ್ದ ಗೆಜ್ಜೆಯ ಸದ್ದು ಅದೂ ಇಲ್ಲ. ಮನೆ ನೀರವ ಮೌನ ತಾಳಿದೆ. ಮನೆಮಂದಿಯಲ್ಲಿ ಮಾತಿಲ್ಲ ಕಥೆಯಿಲ್ಲ. ಏಕೆಂದರೆ ಅದೆಲ್ಲವೂ ಆ ಪುಟ್ಟ ಕಂದ ತಗೊಂಡು ಹೋಗಿದ್ದಾನೆ.
ಹೌದು, ಆಕಸ್ಮಿಕವಾಗಿ ಮಗುವೊಂದು ಬಿದ್ದು, ಮೆದುಳು ನಿಷ್ಕ್ರಿಯಗೊಂಡು ಸಾವೀಗೀಡಾದ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಈ ದುಃಖದ ನಡುವೆಯೂ ಹೆತ್ತ ತಂದೆ ತಾಯಂದಿರು ಮಗುವಿನ ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಖಾಸಗಿ ಗುತ್ತಿಗೆದಾರ ಉಪಿಂದರ್ ಎಂಬುವವರ 16 ತಿಂಗಳ ಮಗು ದಿಶಾಂತ್ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದ ವೇಳೆ ಆಗಸ್ಟ್ 17ರಂದು ಬಿದ್ದು ಗಂಭೀರ ಗಾಯಗೊಂಡಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗುವಿನ ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ಘೋಷಿಸಿದರು. ಮಗುವಿನ ಅಂಗಾಂಗ ದಾನ ಮಾಡಿದರೆ ಹಲವರ ಜೀವಕ್ಕೆ ಬೆಳಕಾಗುತ್ತದೆ ಎಂದು ಏಮ್ಸ್ ವೈದ್ಯರು ರಿಶಾಂತ್ ಪೋಷಕರಿಗೆ ಸಲಹೆ ನೀಡಿದರು. ಹೀಗಾಗಿ ಪೋಷಕರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು.
ರಿಶಾಂತ್ ಕಂಡರೆ ಮನೆಮಂದಿಗೆ ಮುದ್ದು. ಆತ ನಾನು ಕೆಲಸಕ್ಕೆ ಹೊರಡುವ ತರಾತುರಿಯಲ್ಲಿದ್ದಾಗ ಬಿದ್ದಿದ್ದಾನೆ. ನನ್ನಿಂದ ಆತನನ್ನು ಹಿಡಿದುಕೊಳ್ಳಲು ಸಾಧ್ಯವಾಗಿಲ್ಲ, ಅವನ ಅಂಗಾಂಗಗಳಿಂದ ಇತರರ ಜೀವ ಉಳಿಯಲಿ ಎಂಬ ಉದ್ದೇಶದಿಂದ ಅಂಗಾಂಗ ದಾನಕ್ಕೆ ಮುಂದಾಗಿದ್ದೇವೆ ಎಂದು ರಿಶಾಂತ್ ತಂದೆ ಉಪೀಂದರ್ ಭಾವುಕರಾಗಿ ಹೇಳಿದ್ದಾರೆ.