ಏಟಿನ ಮೇಲೆ ನೂರೆಂಟು ಏಟು | ಒಂದೇ ದಿನ ಕಾಂಗ್ರೆಸ್ ನ ಐದು ವಿಕೆಟ್ ಪತ ಪತ !!
ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ 5 ಶಾಸಕರು ಪಕ್ಷವನ್ನು ತೊರೆದು ಕಾಂಗ್ರೆಸ್‌ಗೆ ಮತ್ತೊಮ್ಮೆ ಚಮಕ್ ನೀಡಿದ್ದಾರೆ. ಇವತ್ತು ರಾಜೀನಾಮೆ ನೀಡಿದ ಗುಲಾಂ ನಬಿ ಹೊಸ ಪಕ್ಷ ಸ್ಥಾಪನೆಯ ಇಂಗಿತ ವ್ಯಕ್ತಪಡಿಸಿದ್ದಾರೆ.
ಇವತ್ತು ಗುಲಾಮ್ ನಬೀದ್ ಅಜಾದ್ ಅವರಿಗೆ ಬೆಂಬಲ ಸೂಚಿಸುವಂತೆ, ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ನಾಯಕರಾದ ಗುಲಾಂ ಮೊಹಮ್ಮದ್ ಸರೂರಿ, ಹಾಜಿ ಅಬ್ದುಲ್ ರಶೀದ್, ಮೊಹಮ್ಮದ್ ಅಮೀನ್ ಭಟ್, ಗುಲ್ಜಾರ್ ಅಹ್ಮದ್ ವಾನಿ, ಚೌಧರಿ ಅಕ್ರಂ ಮೊಹಮ್ಮದ್ ಮತ್ತು ಸಲ್ಮಾನ್ ನಿಜಾಮಿ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಇವತ್ತು ತಮ್ಮ ರಾಜೀನಾಮೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆಜಾದ್, ನಾನು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಿ, ರಾಜ್ಯದಲ್ಲಿ ನನ್ನದೇ ಆದ ಹೊಸ ಪಕ್ಷವನ್ನು ರಚಿಸುತ್ತೇನೆ. ಬಳಿಕ ಅದನ್ನು ರಾಷ್ಟ್ರ ಮಟ್ಟಕ್ಕೆ ಬೆಳೆಸಲು ಯೋಜಿಸುತ್ತೇನೆ ಎಂದು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲು ಅವರು ಹೊಸ ಪಕ್ಷವನ್ನು ಸ್ಥಾಪಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಗುಲಾಂ ನಬಿ ಆಜಾದ್ ಅವರು ಕೆಲ ದಿನಗಳ ಹಿಂದೆ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ಹಾಗೂ ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್‌ನ ರಾಜಕೀಯ ವ್ಯವಹಾರಗಳ ಸಮಿತಿಗೆ ರಾಜೀನಾಮೆ ನೀಡಿದ್ದರು. ಇಂದು ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದಾರೆ. ಈಗ ಕಾಂಗ್ರೆಸ್ಸ್ ನ ಕಟ್ಟ ಕಡೆಯ ತಂತುವನ್ನೂ ಕಳೆದುಕೊಂಡು ಹೊಸ ರಾಜಕೀಯ ಆಕಾಕ್ಷೆಯಲ್ಲಿ ಅಜಾದ್ ಇದ್ದಾರೆ.