ಧರ್ಮಸ್ಥಳ | ದೇವಸ್ಥಾನದಲ್ಲಿ ‘ಪಹರೆ ‘ ಉದ್ಯೋಗದಲ್ಲಿದ್ದ ವ್ಯಕ್ತಿ ಆತ್ಮಹತ್ಯೆ, ಕಾರಣ ಅಸ್ಪಷ್ಟ

ಧರ್ಮಸ್ಥಳ : ಧರ್ಮಸ್ಥಳದ ದೇವಸ್ಥಾನದಲ್ಲಿ ಉದ್ಯೋಗದಲ್ಲಿದ್ದ ನೆಲ್ಯಾಡಿ ಮೂಲದ ವ್ಯಕ್ತಿಯೊಬ್ಬರು  ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಆಗಸ್ಟ್ 25 ರಂದು ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ನೆಲ್ಯಾಡಿಯ ಮಾದೇರಿ ಸಮೀಪದ ಫಲಡ್ಕ ನಿವಾಸಿ ವಸಂತ ಮಡಿವಾಳ (44) ಎಂದು ಗುರುತಿಸಲಾಗಿದೆ.

ಆ.25ರಂದು ಮಧ್ಯಾಹ್ನ ಕೊಕ್ಕಡ ಗ್ರಾಮದ ಕೆಂಪಕೋಡಿಯಲ್ಲಿರುವ ಪತ್ನಿಯ ಮನೆಗೆ ಬಂದು ಮದ್ಯದ ಜೊತೆ ವಿಷಪದಾರ್ಥ ಸೇವಿಸಿದ್ದರು. ಅಸ್ವಸ್ಥಗೊಂಡಿದ್ದ ವಸಂತ ಮಡಿವಾಳರವರನ್ನು ಮನೆಯವರು ತಕ್ಷಣ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ಕರೆತಂದಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರು ತಡರಾತ್ರಿ ವೇಳೆ ಕೊನೆಯುಸಿರೆಳೆದರು ಎಂದು ವರದಿಯಾಗಿದೆ.

ಮೃತ ವಸಂತರವರು ವಿಪರೀತ ಮದ್ಯ ವ್ಯಸನಿ ಆಗಿದ್ದು, ಮದ್ಯದ ಜತೆಗೆ ವಿಷ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರು ಧರ್ಮಸ್ಥಳದ ದೇವಾಲಯದಲ್ಲಿ ‘ ಪಹರೆ ‘ ನಡೆಸುತ್ತಿದ್ದರು. ಅಲ್ಲಿ ಕಾವಲುಗಾರನಾಗಿ ಇದ್ದರೂ ವಿಪರೀತ ಕುಡಿತದ ಚಟ ಬೆಳೆಸಿಕೊಂಡಿದ್ದರು ಎನ್ನುವುದು ಆಶ್ಚರ್ಯದ ವಿಷಯ.

ಅಲ್ಲದೆ, ಇವರು ಮತ್ತು ಪತ್ನಿಗೆ ಆಗಾಗ ಜಗಳವಾಡುತ್ತಿತ್ತು ಎನ್ನಲಾಗಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.  ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಸಂತರವರ ಪತ್ನಿ ಮನೆ ಕೊಕ್ಕಡವಾಗಿದ್ದು ಅಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ತಾಯಿ, ಪತ್ನಿ ಹರಿಣಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.

Leave A Reply

Your email address will not be published.