ರಾಜ್ಯದ ರೈತರೇ ನಿಮಗೊಂದು ಗುಡ್ ನ್ಯೂಸ್ |
‘ಕರ್ನಾಟಕ ಭೂ ಕಬಳಿಕೆ ಕಾಯ್ದೆ ತಿದ್ದುಪಡಿ’ಗೆ ಸಂಪುಟ ಒಪ್ಪಿಗೆ
ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಕರ್ನಾಟಕ ಭೂ ಕಬಳಿಕೆ ಕಾಯ್ದೆಯ ತಿದ್ದುಪಡಿಗೆ, ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಈ ಹಿನ್ನಲೆಯಲ್ಲಿ ರಾಜ್ಯದ ಗ್ರಾಮೀಣ ಪ್ರದೇಶದ ರೈತರ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವುದರಿಂದ ರಕ್ಷಣೆ ದೊರೆಯಲಿದೆ. ಈ ಮೂಲಕ ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್ ದೊರೆತಂತೆ ಆಗಿದೆ.
“ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಭೂ ಕಬಳಿಕೆ (ನಿಷೇಧ) ಕಾಯಿದೆ 2011ರ ಕಲಮು 2(ಡಿ) ಗೆ ತಿದ್ದುಪಡಿ ತರಲು ನಿರ್ಧಾರ ಮಾಡಿದ್ದು, ಬಹುದಿನಗಳ ಜನತೆಯ ಬೇಡಿಕೆಗೆ ಸ್ಪಂದಿಸಿದಂತಾಗಿದೆ” ಎಂದು ಈ ಸಭೆಯಲ್ಲಿ ಭಾಗವಹಿಸಿದ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಪ್ರಸ್ತಾವಿತ ಕರಡು ತಿದ್ದುಪಡಿಯು, ಯಾವುದೇ ರೀತಿಯಲ್ಲಿಯೂ ವಿಧೇಯಕದ ಮೂಲ ಕರಡಿಗೆ ವಿರುದ್ಧವಾಗಿರದೆ, ಗ್ರಾಮೀಣ ಪ್ರದೇಶದ, ರೈತರ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವುದರಿಂದ ರಕ್ಷಣೆ ದೊರೆಯುತ್ತದೆ. ಸಣ್ಣ ಹಾಗೂ ಅತಿ ಸಣ್ಣ ರೈತರು ಹಾಗೂ ಜನಸಾಮಾನ್ಯರು, ಬಗರ್ ಹುಕುಮ್ ಸಾಗುವಳಿ ಸಂಬಂಧ, ಬೆಂಗಳೂರಿನಲ್ಲಿ ಸ್ಥಾಪಿತವಾದ ವಿಶೇಷ ನ್ಯಾಯಾಲಯಕ್ಕೆ ಅಲೆಯುವುದನ್ನು ತಪ್ಪಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.
ಈ ವಿಷಯದ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬಂದು, ವಿಧೇಯಕಕ್ಕೆ ತಿದ್ದುಪಡಿ ತರಲು ನಿರ್ಧರಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್ ಅಶೋಕ್ ಅವರನ್ನು, ಹಾರ್ಧಿಕವಾಗಿ ಅಭಿನಂದಿಸಿದ್ದಾರೆ ಗೃಹ ಸಚಿವ ಆರಗ ಜ್ಞಾನೇಂದ್ರ.