ಇದು ಉಲ್ಟಾ ಝೂ, ಈ ‘ ಮಾನವ ಮೃಗಾಲಯ ‘ ಕ್ಕೆ ಪ್ರವಾಸಿಗರನ್ನು ಭೇಟಿ ಮಾಡಲು ವನ್ಯ ಮೃಗಗಳೇ ಧಾವಿಸಿ ಬರುತ್ತವೆ !!!
ಇದು ಉಲ್ಟಾ ಝೂ !!! ಇದೊಂಥರಾ ತೀರಾ ವಿಚಿತ್ರ ಸನ್ನಿವೇಶ. ಕಾಡು ಜೀವಿಗಳನ್ನು ನೋಡಲು ಮತ್ತು ವನ್ಯಲೋಕವನ್ನು ಅರಿತುಕೊಳ್ಳಲು, ನಾವು ಸಫಾರಿ ಹೋಗುವುದಿದೆ. ಅಥವಾ ಝೂ ಗೆ ತೆರಳುವುದಿದೆ. ಆದರೆ ಇಲ್ಲಿ ಪ್ರವಾಸಿಗರನ್ನು ಭೇಟಿ ಮಾಡಲು ವನ್ಯ ಮೃಗಗಳೇ ಧಾವಿಸಿ ಬರುತ್ತವೆ ! ಏನಿದು, ಎಲ್ಲಿ ಈ ವಿಚಿತ್ರ ? ಏನಿದರ ವಿಶೇಷತೆ ಎಂಬ ಕುತೂಹಲ ಮೂಡಿದವರಿಗೆ ಈ ಲೇಖನ.
ಹೌದು ಇದು ಉಲ್ಟಾ ಝೂ. ಎಲ್ಲಾ ವನ್ಯಜೀವಿ ಮೃಗಾಲಯದಲ್ಲಿ ಪ್ರಾಣಿಗಳು ಬಂಧಿಯಾಗಿದ್ದರೆ, ಈ ಮೃಗಾಲಯದಲ್ಲಿ ಪ್ರಾಣಿಗಳು ಫುಲ್ ಫ್ರೀ. ಅವು ಬಿಂದಾಸ್ ಆಗಿ ಓಡಾಡಿಕೊಂಡಿರುತ್ತವೆ. ಆದರೆ ಈ ಮೃಗಾಲಯದಲ್ಲಿ ಮನುಷ್ಯರನ್ನು ಪಂಜರದಲ್ಲಿ ಬಂಧಿಸಿ ಇರಿಸಲಾಗಿದೆ ! ಈ ವನ್ಯಜೀವಿ ಮೃಗಾಲಯದಲ್ಲಿ ಮುಕ್ತವಾಗಿ ವಿಹರಿಸಲು ಪ್ರಾಣಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ಅವು ಇಲ್ಲಿ ಸ್ವಚ್ಛಂದ ಜೀವಿಗಳು. ಆದರೆ ಮನುಷ್ಯ ಮಾತ್ರ ಇಲ್ಲಿ ಪಂಜರದ ಬಂಧಿ !
ಈ ವ್ಯವಸ್ಥೆ ಇರೋದು ಚೀನಾದಲ್ಲಿ. ಅಲ್ಲಿನ ಆ ವಿಶಿಷ್ಟವಾದ ಮೃಗಾಲಯದಲ್ಲಿ. ಇಲ್ಲಿ ಪ್ರಾಣಿಗಳಲ್ಲ, ಆದರೆ ಮನುಷ್ಯರನ್ನೇ ಪಂಜರದಲ್ಲಿ ಇರಿಸಲಾಗುತ್ತದೆ. ಸಿಂಹ, ಹುಲಿಯಂತಹ ವನ್ಯಮೃಗಗಳು ಮನುಷ್ಯರು ಇರುವ ಪಂಜರದ ಬಳಿ ಬಂದು ಮನುಷ್ಯರನ್ನು ಕಂಡು, ‘ಹೇ….ಇದ್ಯಾವುದು ಕಾಡು ಪಾಪ ? ಯಾವುದಕ್ಕೂ ಉಪಯೋಗ ಇಲ್ಲದ ಥರ ಮೈ- ಬೊಜ್ಜು ಬೆಳೆಸ್ಕೊಂಡು ವಿಚಿತ್ರವಾಗಿ ಇದ್ಯಲ್ಲಾ ? ‘ ಎಂಬಂತೆ ಮನುಷ್ಯರನ್ನು ನೋಡಿ ಹೀಯಾಳಿಸಿ ಹೋಗೋದನ್ನು ಇಲ್ಲಿ ಕಾಣಬಹುದು !!
ಚೀನಾದ ಚಾಂಗ್‌ಕಿಂಗ್‌ನಲ್ಲಿರುವ ಲೆಹೆ ಲೆಡು ವನ್ಯಜೀವಿ ಮೃಗಾಲಯವು ಪ್ರಾಣಿಗಳಿಗೆ ಮುಕ್ತವಾಗಿ ವಿಹರಿಸಲು ವ್ಯವಸ್ಥೆ ಮಾಡಿದೆ. ಆದರೆ ಈ ಮೃಗಾಲಯದಲ್ಲಿ ಜನರನ್ನು ಪಂಜರದಲ್ಲಿ ಬಂಧಿಸಲಾಗಿದೆ. ಹುಲಿ, ಸಿಂಹ ಮತ್ತು ಕರಡಿಗಳಂತಹ ಕಾಡು ಪ್ರಾಣಿಗಳನ್ನು ಅಟ್ಟಿಸಿಕೊಂಡು ಹೋಗುವುದನ್ನು ಇಲ್ಲಿ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶವಿದೆ. ಇದಕ್ಕಾಗಿ ಪ್ರತ್ಯೇಕ ಟಿಕೆಟ್ ವ್ಯವಸ್ಥೆ ಇದೆ. ಬ್ಯಾರಿಕೇಡ್ ಮಾಡಿದ ಟ್ರಕ್‌ನ ಬಾರ್‌ಗಳಿಗೆ ಹಸಿ ಮಾಂಸದ ಉಂಡೆಗಳನ್ನು ಕಟ್ಟಿರುತ್ತಾರೆ. ಸಂದರ್ಶಕರು ಅಂತಹ ಪ್ರಾಣಿಗಳನ್ನು ಹೆಚ್ಚು ಹತ್ತಿರದಿಂದ ನೋಡುವ ಅವಕಾಶವನ್ನು ಹೊಂದಿರುತ್ತಾರೆ. ಪ್ರಾಣಿಗಳು ಆಹಾರದ ನಿರೀಕ್ಷೆಯಲ್ಲಿ ಮನುಷ್ಯರು ಇರುವ ಪಂಜರಗಳತ್ತ ಸುಳಿಯುತ್ತವೆ. ಕೆಲವೊಮ್ಮೆ ಅವು ಮನುಷ್ಯರನ್ನು ಇರಿಸಲಾಗಿರುವ ಪಂಜರದ ಮೇಲೂ ಏರಿಬರುತ್ತವೆ. ಆದರೆ ಅದು ಭದ್ರವಾದ ಪಂಜರ. ಪ್ರಾಣಿಗಳು ಮನುಷ್ಯರ ಮೇಲೆ ಅಟ್ಯಾಕ್ ಮಾಡಲು ಸಾಧ್ಯ ಇಲ್ಲ. ಈ ಸಂಬಂಧಿತ ವಿಡಿಯೋ ಒಂದು ಈಗ ಜಾಲತಾಣದಲ್ಲಿ ವೈರಲ್ ಆಗಿದೆ ಮತ್ತು ಲಕ್ಷಾಂತರ ಜನರನ್ನು ಅದು ಆಕರ್ಷಿಸಿದೆ.
ಈ ವೀಡಿಯೊವನ್ನು ತನ್ಸು ಯೆಗೆನ್ ಎಂಬವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ಇದು ಮಾನವ ಮೃಗಾಲಯವಾಗಿದ್ದು, ಪ್ರಾಣಿಗಳು ಪಂಜರ ಸೇರಿರುವ ಅಪಾಯಕಾರಿ ಮನುಷ್ಯರನ್ನು ನೋಡಬಹುದು” ಎಂದು ಮನುಷ್ಯರಿಗೆ ‘ತಕ್ಕುದಾದ’ ಶೀರ್ಷಿಕೆ ನೀಡಲಾಗಿದೆ. ಅಲ್ಲದೆ, ಈ ವಿಡಿಯೋ 8,27,000 ಕ್ಕಿಂತ ಹೆಚ್ಚು ವೀಕ್ಷಣೆಗಳನ್ನು ಮತ್ತು 5,000 ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಗಳಿಸಿಸಿದೆ. ಇನ್ನು ಒಬ್ಬ ನೆಟ್ಟಿಗರಂತೂ “ಇದು ಎಲ್ಲೆಡೆಯೂ ಹೀಗಿರಬೇಕು. ಅಸಲಿಗೆ ಪ್ರಾಣಿಗಳನ್ನೇ ಏಕೆ ಪಂಜರದಲ್ಲಿ ಇಡಬೇಕು ? ಎಂದಿದ್ದಾರೆ.