ಮಂಗಳೂರು : ರಸ್ತೆ ಅವ್ಯವಸ್ಥೆಯಿಂದಾಗಿ ಮುರಿದುಹೋಯ್ತು ಬಸ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಬೆನ್ನುಮೂಳೆ!

ಮಂಗಳೂರು: ಕಲ್ಲಡ್ಕದಲ್ಲಿ ರಸ್ತೆ ಅವ್ಯವಸ್ಥೆಯಿಂದಾಗಿ ಬಸ್ ನಲ್ಲಿ ಹೋಗುತ್ತಿರುವಾಗ ವ್ಯಕ್ತಿಯೊಬ್ಬರ ಬೆನ್ನುಮೂಳೆ ಮುರಿದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಬೆನ್ನು ಮೂಳೆ ಮುರಿತಕ್ಕೊಳಗಾದವರು ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿಯಾಗಿರುವ ವಿಜಯ್ ಕುಮಾರ್.

ವಿಜಯ್ ಕುಮಾರ್ ಮೊಬೈಲ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಇವರು ಮೊಬೈಲ್ ಬಿಡಿಭಾಗಕ್ಕಾಗಿ ಮಂಗಳೂರಿಗೆ ಬಂದಿದ್ದರು. ಮಂಗಳೂರಿನಿಂದ ಮತ್ತೆ ಬೆಳ್ಳಾರೆಗೆ ಹೋಗುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ವಿಜಯ್ ಕುಮಾರ್ ಬಸ್ಸಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಸರ್ಕಾರಿ ಬಸ್ ರಸ್ತೆ ಗುಂಡಿಗೆ ಬಿದ್ದಿದೆ. ಈ ವೇಳೆ ವಿಜಯ್ ಸೀಟಿನಿಂದ ಮೇಲೆ ಹಾರಿದ್ದಾರೆ. ಪರಿಣಾಮ ಬಸ್ಸಿನ ರಾಡ್ ತಾಗಿ ವಿಜಯ್ ಕುಮಾರ್ ಬೆನ್ನಿಗೆ ಗಂಭೀರ ಪೆಟ್ಟು ಬಿದ್ದಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯ್ ಅವರ ಬೆನ್ನು ಹುರಿ, ಕುತ್ತಿಗೆ ಭಾಗದ ಎಲುಬು ಜಖಂಗೊಂಡಿದೆ. ಬೆನ್ನು ಮೂಳೆ ಆಪರೇಷನ್ ಗೆ ವೈದ್ಯರು ಸೂಚಿಸಿದ್ದಾರೆ. ಸದ್ಯ ವಿಜಯ್ ಕುಮಾರ್ ಅವರು ಮಲಗಿದ ಸ್ಥಿತಿಯಲ್ಲೇ ಇದ್ದಾರೆ.

ನನ್ನ ದುಸ್ಥಿತಿಗೆ ಬಸ್ ಚಾಲಕ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಣೆಯಾಗಿದ್ದಾರೆ. ನನ್ನ ದೇಹದ ಕೆಳಭಾಗವು ನಿಶಕ್ತವಾಗಿದೆ. ನನ್ನ ಹೆಂಡತಿ ಮತ್ತು ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಚಿಂತೆ ನನ್ನನ್ನು ಕಾಡುತ್ತಿದೆ ಎಂದು ವಿಜಯ್ ಅಳಲು ತೋಡಿಕೊಂಡಿದ್ದಾರೆ.

ಬಸ್ಸಿನ ಚಾಲಕ ಅಬ್ದುಲ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 279 (ಸಾರ್ವಜನಿಕ ಮಾರ್ಗದಲ್ಲಿ ರ್ಯಾಶ್ ಡ್ರೈವಿಂಗ್), 283 ಮತ್ತು 337 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಕಲ್ಲಡ್ಕ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಈ ರಾಷ್ಟ್ರೀಯ ಹೆದ್ದಾರಿ ಬೃಹತ್ ಗುಂಡಿಗಳಿಂದ ಕೂಡಿದೆ. ಇವರಿಗೆ ಆದ ಸ್ಥಿತಿ ಯಾವ ಪ್ರಯಾಣಿಕರಿಗೆ ಆಗಬಾರದು ಎಂಬುದೇ ಸಾರ್ವಜನಿಕರ ಕೂಗು..

Leave A Reply

Your email address will not be published.