ಪುತ್ತೂರು ಉಪವಿಭಾಗದ ಡಿವೈಎಸ್ಪಿ ಡಾ. ಗಾನಾ ಪಿ ಕುಮಾರ್ ಅವರಿಗೆ ವರ್ಗಾವಣೆ

ಪುತ್ತೂರು : ಉಪವಿಭಾಗದ ಡಿವೈಎಸ್ಪಿಯಾಗಿದ್ದ ಡಾ. ಗಾನಾ ಪಿ ಕುಮಾರ್ ಅವರನ್ನು ವರ್ಗಾವಣೆಗೊಳಿಸಿ, ಕರ್ನಾಟಕ ರಾಜ್ಯದ ಪೊಲೀಸ್‌ ಮಹಾನಿರ್ದೇಶಕರು ಆ.19 ರಂದು ಆದೇಶ ಹೊರಡಿಸಿದ್ದಾರೆ. ಅವರ ಜಾಗಕ್ಕೆ ಪ್ರಸ್ತುತ ಬೆಂಗಳೂರಿನಲ್ಲಿ ಸಿಐಡಿಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೀರಯ್ಯ ಹಿರೇಮಠ ಅವರನ್ನು ನೇಮಕ ಮಾಡಲಾಗಿದೆ.

 

2020ರ ಸೆಪ್ಟಂಬರ್‌ ತಿಂಗಳಿನಲ್ಲಿ ಡಾ. ಗಾನಾ ಪಿ ಕುಮಾರ್ ಅವರು ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಸರಿ ಸುಮಾರು ಎರಡು ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿದ ಅವರನ್ನು ಸಿಐಡಿ ವಿಭಾಗಕ್ಕೆ ವರ್ಗಾವಣೆಗೊಳಿಸಲಾಗಿದೆ. ಪುತ್ತೂರು ಉಪ ವಿಭಾಗದ ನೂತನ ಡಿವೈಎಸ್ಪಿಯಾಗಿ ನೇಮಕವಾಗಿರುವ ವೀರಯ್ಯ ಹಿರೇಮಠ ಅವರು ಪ್ರಾಯೋಗಿಕ ತರಬೇತಿ ಪೂರ್ಣಗೊಳಿಸಿ ತಿಂಗಳ ಹಿಂದೆಯಷ್ಟೇ ಸಿಐಡಿಗೆ ತಾತ್ಕಾಲಿಕವಾಗಿ ನಿಯುಕ್ತಿಗೊಂಡಿದ್ದರು. ಮಹಾ ನಿರ್ದೇಶಕರು ಮತ್ತು ಅರಕ್ಷಕ ಮಹಾನಿರೀಕ್ಷಕರ ಪರವಾಗಿ ಡಾ. ಎಂ ಎ ಸಲೀಂ ಐಪಿಎಸ್‌ ಅವರು ಈ ವರ್ಗಾವಣೆ ಆದೇಶ ಹೊರಡಿಸಿದ್ದಾರೆ.

ಡಾ.ಗಾನಾ ಪಿಕುಮಾರ್ ಪುತ್ತೂರು ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ ಅವಧಿಯು ಪೊಲೀಸ್‌ ಇಲಾಖೆಗೆ ಬಹಳಷ್ಟು ಸವಾಲಿನಿಂದ ಕೂಡಿತ್ತು. ಕಾಲೇಜ್‌ – ವಿದ್ಯಾಸಂಸ್ಥೆಗಳಲ್ಲಿ ನಡೆದ ವಿವಾದ ಹಾಗೂ ಹೊಡೆದಾಟಗಳು, ರಾಜಕೀಯ ಪ್ರಭಾವಗಳಿದ್ದ ಹಲವು ಹತ್ಯೆ ಪ್ರಕರಣಗಳು, ಮತೀಯ ಸಂಘರ್ಷಗಳು, ನೈತಿಕ ಪೊಲೀಸ್‌ ಗಿರಿ ಹಾಗೂ ಸ್ವತಃ ಪೊಲೀಸ್‌ ಸಿಬ್ಬಂದಿಯೇ ಅತ್ಯಾಚಾರ ಪ್ರಕರಣವೊಂದರಲ್ಲಿ ಸಿಕ್ಕಿ ಹಾಕಿಕೊಂಡ ಪ್ರಕರಣಗಳು ಇದೇ ಅವಧಿಯಲ್ಲಿ ನಡೆದಿದ್ದವು.

ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹಾಗೂ ಮಸೂದ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕಳೆದೆರಡು ವರ್ಷಗಳಿಂದ ಸುಳ್ಯ, ಕಡಬ, ಪುತ್ತೂರು ತಾಲೂಕುಗಳನ್ನು ಒಳಗೊಂಡ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿ ಜನಪರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಗಾನಾ ಪಿ.ಕುಮಾರ್ ಅವರನ್ನು ಇದೀಗ ವರ್ಗಾವಣೆ ಮಾಡಲಾಗಿದೆ.

Leave A Reply

Your email address will not be published.