ಮತ್ತೆ ಮತ್ತೆ ಸಂಭವಿಸಿದ ಭೂಕಂಪ |
ದೇಶದ ಹಲವು ಕಡೆಗಳಲ್ಲಿ ಭೂಕಂಪ ಸಂಭವಿಸುವ ಘಟನೆಗಳು ನಡೆಯುತ್ತಲೇ ಇದೆ. ಶನಿವಾರ ವಿಜಯಪುರದಲ್ಲಿ ಭೂಕಂಪ ಸಂಭವಿಸಿದ್ದು, ಈಗ
ರಾಜಸ್ಥಾನದ ವಾಯವ್ಯ ಬಿಕನೇರ್ ಪ್ರದೇಶದಲ್ಲಿ ಲಘು ಭೂಕಂಪ ಆಗಿದೆ.
ಇಂದು (ಸೋಮವಾರ) ಬೆಳಗಿನ ಜಾವ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 4.1ರಷ್ಟಿತ್ತು ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ತಿಳಿಸಿದೆ.
ಸೋಮವಾರ ಬೆಳಗ್ಗಿನ ಜಾವ 2 ಗಂಟೆಯ ಸುಮಾರಿಗೆ ಭೂಕಂಪ ಸಂಭವಿಸಿದೆ. ನೆಲಮಟ್ಟದಿಂದ ಸುಮಾರು 10 ಕಿಲೋಮೀಟರ್ ಕೆಳಗೆ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ. ಬಿಕನೇರ್‌ನಿಂದ ವಾಯವ್ಯ ಭಾಗಕ್ಕೆ 236 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದೆ ಎಂದು NCS ಟ್ವೀಟ್ ಮಾಡಿದೆ. ಹೆಚ್ಚಿನ ವಿವರಗಳು ತಿಳಿದು ಬಂದಿಲ್ಲ.
ಶನಿವಾರ ಮುಂಜಾನೆ 1.12ಕ್ಕೆ ರಿಕ್ಟರ್ ಮಾಪಕದಲ್ಲಿ 5.2ರಷ್ಟು ತೀವ್ರತೆ ಹೊಂದಿದ್ದ ಭೂಕಂಪ ಲಕ್ನೋದ ಈಶಾನ್ಯದಲ್ಲಿ ಸಂಭವಿಸಿತ್ತು. ಈ ಭೂಕಂಪ ನೆಲಮಟ್ಟದಿಂದ 82 ಕಿಲೋಮೀಟರ್ ಆಳದಲ್ಲಿ ಸಂಭವಿಸಿತ್ತು. ಇದಲ್ಲದೇ ಉತ್ತರಾಖಂಡದ ಪಿತ್ತೋರ್ ಗಢದಲ್ಲಿ 3.6 ತೀವ್ರತೆಯ ಭೂಕಂಪ ಶುಕ್ರವಾರ ಸಂಭವಿಸಿತ್ತು.