ಉಚಿತ ವಿದ್ಯುತ್ ಸೌಲಭ್ಯವನ್ನು ಪಡೆಯಲು ಸುವಿಧಾ ಮೂಲಕ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯ

ಕೊಪ್ಪಳ :ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ಗೃಹ ಬಳಕೆಗೆ ಮಾಸಿಕ 75 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಸೌಲಭ್ಯವನ್ನು ರಾಜ್ಯ ಸರ್ಕಾರ ನೀಡುತ್ತಿದ್ದು, ಗ್ರಾಹಕರು ಇದರ ಉಪಯೋಗ ಪಡೆಯಲು ಸುವಿಧಾ ಮೂಲಕ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.

 

ಈ ಉಚಿತ ವಿದ್ಯುತ್ ಸೌಲಭ್ಯವನ್ನು, ಸರ್ಕಾರದ ಆದೇಶದನ್ವಯ ಅರ್ಹ ಗ್ರಾಹಕರು ಷರತ್ತು ನಿಬಂಧನೆಗಳಿಗೊಳಪಟ್ಟು ಯೋಜನೆಯ ಸೌಲಭ್ಯವನ್ನು ಪಡೆಯಬಹುದು ಎಂದು ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಸರ್ಕಾರದ 2022ರ ಜುಲೈ 27ರ ಆದೇಶದಂತೆ  ಮಾಸಿಕ ಬಳಕೆಯು 250 ಯೂನಿಟ್ ಗಳಿಗಿಂತ ಹೆಚ್ಚಾಗಿದ್ದಲ್ಲಿ ಗ್ರಾಹಕರು ಈ ಯೋಜನೆಗೆ ಅರ್ಹ ರಾಗಿರುವುದಿಲ್ಲ. ಬಡತನ ರೇಖೆಗಿಂತ ಕೆಳಗಿನ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಕುಟುಂಬಕ್ಕೆ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್ ಯೋಜನೆಯ ಲಾಭ ಪಡೆಯಲು ಅರ್ಹ ಫಲಾನುಭವಿಗಳು ಕರ್ನಾಟಕ ಸರ್ಕಾರದ ಕಲ್ಯಾಣ ಯೋಜನೆಗಳು ಮತ್ತು ಆರಂಭದಿಂದ ಅಂತ್ಯದವರೆಗಿನ ಸೇವೆಗಳಿಗಾಗಿರುವ “ಸುವಿಧಾ”  suvidha.karnataka.gov.in     ಮೂಲಕ ಆನ್‌ಲೈನ್ ನಲ್ಲಿ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು. ಅಗತ್ಯ ವಿವರ ಹಾಗೂ ದಾಖಲಾತಿಗಳನ್ನು ಒದಗಿಸಬೇಕು. ಪೂರ್ಣಗೊಂಡ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ನಂಬರ್‌ಗೆ ಬಂದಿರುವ ಓಟಿಪಿ ನಂಬರ್‌ನ್ನು ನಮೂದಿಸುವುದು ಕಡ್ಡಾಯವಾಗಿರುವುದರಿಂದ, ಈಗಾಗಲೇ ಅರ್ಹ ಗ್ರಾಹಕರು ಉಪವಿಭಾಗದಲ್ಲಿ ಅರ್ಜಿ ನೀಡಿದ್ದಲ್ಲಿ ಅಂತಹ ಗ್ರಾಹಕರು ಇನ್ನೊಮ್ಮೆ ಆನ್‌ಲೈನ್ ಮುಖಾಂತರವೇ ಅರ್ಜಿ ಸಲ್ಲಿಸಬೇಕು ಎಂದು ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

ಸೌಲಭ್ಯ ಪಡೆಯಲು ಗ್ರಾಹಕರು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು. ಜಾತಿ ಪ್ರಮಾಣ ಪತ್ರ (ಆರ್‌ಡಿ ಸಂಖ್ಯೆ ಸಹಿತ) ಹೊಂದಿರಬೇಕು. ಬಿ.ಪಿ.ಎಲ್ ರೇಷನ್ ಕಾರ್ಡ್ (ಆರ್‌ಸಿ ಸಂಖ್ಯೆ ಸಹಿತ) ಹೊಂದಿರಬೇಕು. ಆಧಾರ್ ಕಾರ್ಡ್ ಹೊಂದಿದ್ದು, ಕಡ್ಡಾಯವಾಗಿ ಬ್ಯಾಂಕ್ ಖಾತೆಯೊಂದಿಗೆ ಜೋಡಣೆಯಾಗಿರಬೇಕು.

ಅರ್ಹ ಗ್ರಾಹಕರ ವಿದ್ಯುತ್ ಸ್ಥಾವರಗಳಿಗೆ ಕಡ್ಡಾಯವಾಗಿ ಮಾಪಕವನ್ನು ಅಳವಡಿಸಲಾಗುವುದು ಹಾಗೂ ಪ್ರತಿ ತಿಂಗಳು ಮಾಪಕ ಓದುವುದು ಕಡ್ಡಾಯವಾಗಿರುತ್ತದೆ. ಈ ಸೌಲಭ್ಯಕ್ಕೆ ಅರ್ಹರಾಗುವ ಗ್ರಾಹಕರು ಮಾಸಿಕ ವಿದ್ಯುತ್ ಬಿಲ್ಲನ್ನು ನಿಗದಿತ ಅವಧಿಯೊಳಗೆ ಸಂಪೂರ್ಣವಾಗಿ ಪಾವತಿಸಬೇಕು. ಅರ್ಹ ವಿದ್ಯುತ್ ಗ್ರಾಹಕರು ಏಪ್ರಿಲ್ 30 ರ ಅಂತ್ಯಕ್ಕೆ ಇರುವ ಬಾಕಿ ವಿದ್ಯುತ್ ಶುಲ್ಕದ ಮೊತ್ತವನ್ನು ಸಂಪೂರ್ಣವಾಗಿ  ಪಾವತಿಸತಕ್ಕದ್ದು ಎಂದು ತಿಳಿಸಿದ್ದಾರೆ.

Leave A Reply

Your email address will not be published.