ಟ್ಯಾಬ್ಲೆಟ್ ಕಾರ್ಡ್ ಮಾದರಿಯಲ್ಲಿ ತಯಾರಾಗಿದೆ ‘ಮದುವೆ ಕಾರ್ಡ್’ | ವಿವಾಹದ ಆಮಂತ್ರಣ ಪತ್ರಿಕೆಯಲ್ಲೂ ತಮ್ಮ ವೃತ್ತಿಪರತೆ ತೋರಿಸಿದ ಜೋಡಿ
ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಮುಖ್ಯವಾದ ಘಟ್ಟ. ಆದ್ದರಿಂದ ಪ್ರತಿಯೊಂದು ಜೋಡಿಯೂ ತಮ್ಮ ವಿವಾಹ, ಜೀವನ ಪರಿಯಂತ ಪ್ರತಿಯೊಂದು ಹೆಜ್ಜೆಯೂ ನೆನಪು ಉಳಿಯುವಂತೆ ಇರಬೇಕೆಂದು ಬಯಸುತ್ತಾರೆ. ಹೀಗಾಗಿ ಜೋಡಿಗಳು ಎಲ್ಲಾ ರೀತಿಯ ಪ್ಲಾನ್ ಗಳನ್ನು ಮುಂಚಿತವಾಗಿ ಮಾಡುತ್ತಾರೆ. ಕೆಲವರಿಗೆ ಬಂದ ಅತಿಥಿಗಳಿಗೆ ಯಾವ ರೀತಿ ಉಪಚಾರ ನೀಡುವುದು ಎಂದಾದರೆ, ಇನ್ನೂ ಕೆಲವರಿಗೆ ತಮ್ಮ ಮದುವೆಯ ಡ್ರೆಸ್ಸಿಂಗ್, ಫೋಟೋಗ್ರಾಫರ್ ಬಗ್ಗೆ ಚಿಂತೆ. ಇವಾಗ ಅಂತೂ ಪ್ರಿ ವೆಡ್ಡಿಂಗ್ ಫೋಟೋ ಶೂಟ್, ಹಳದಿ, ಮೆಹಂದಿ ಹೀಗೆಲ್ಲ ವೆರೈಟಿ ಪ್ಲಾನಿಂಗ್ ಇದೆ. ಆದರೆ ಸಾಮಾನ್ಯವಾಗಿ ಯಾವುದೇ ಗಂಡು-ಹೆಣ್ಣು ಮದುವೆ ಕಾರ್ಡ್ ಬಗ್ಗೆ ಅಷ್ಟೊಂದು ಯೋಚಿಸುವುದಿಲ್ಲ. ಸಿಂಪಲ್ ಆಗಿ ಮಾಡಿ ಸ್ನೇಹಿತರಿಗೆ, ಫ್ಯಾಮಿಲಿ ಗೆ ಹಂಚುತ್ತಾರೆ. ಆದರೆ ಇಲ್ಲೊಂದು ಜೋಡಿ ತನ್ನ ಮದುವೆಗಾಗಿ ನೀಡುವ ಆಮಂತ್ರಣದಲ್ಲೂ ವಿಭಿನ್ನತೆಗೆ ಹೆಚ್ಚು ಒತ್ತು ನೀಡಿದ್ದು ವಿಶೇಷವೇ ಸರಿ.
ಇಂತಹದ್ದೊಂದು ವಿಶೇಷ ಹಾಗೂ ವಿಭಿನ್ನವಾದ ಆಮಂತ್ರಣ ಪತ್ರಿಕೆ ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ಮುದ್ರಣವಾಗಿದೆ. ವಧು-ವರರಿಬ್ಬರು ಟ್ಯಾಬ್ಲೆಟ್(ಮಾತ್ರೆ) ಕಾರ್ಡ್ ಮಾದರಿಯ ಆಮಂತ್ರಣ ಪತ್ರಿಕೆ ರಚಿಸಿದ್ದಾರೆ. ಇವರ ಈ ವೆರೈಟಿ ಪ್ಲಾನಿಂಗ್ ಗೆ ಕಾರಣ ಇವರ ಹುದ್ದೆ. ಈ ಜೋಡಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿರುವವರೇ ಆಗಿದ್ದು, ವಿವಾಹದ ಆಮಂತ್ರಣ ಪತ್ರಿಕೆಯಲ್ಲೂ ತಮ್ಮ ವೃತ್ತಿಪರತೆ ತೋರಿದ್ದಾರೆ.
ವರ ಫಾರ್ಮಾಸಿಸ್ಟ್, ವಧು ನರ್ಸ್ ಆಗಿ ಕೆಲಸ ಮಾಡುತ್ತಿದ್ದು ಅವರು ಟ್ಯಾಬ್ಲೆಟ್(ಮಾತ್ರೆ) ಕಾರ್ಡ್ ಮಾದರಿಯ ಆಮಂತ್ರಣ ಪತ್ರಿಕೆ ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ತಯಾರಿಸಿದ್ದಾರೆ. ವರನ ಹೆಸರು ಎಜಿಲರಸನ್. ವಧುವಿ ಹೆಸರು ವಸಂತಕುಮಾರಿ. ತಿರುವಣ್ಣಾಮಲೈ ಜಿಲ್ಲೆಯ ಎಜಿಲರಸನ್ ಮತ್ತು ವಿಲ್ಲುಪುರಂ ಜಿಲ್ಲೆಯ ಗೆಂಜಿಯ ವಸಂತಕುಮಾರಿ ಅವರ ಮದುವೆ 2022ರ ಸೆಪ್ಟೆಂಬರ್ 5ರಂದು ನಡೆಯಲಿದೆ. ಎಲ್ಲ ಸ್ನೇಹಿತರು ಮತ್ತು ಬಂಧುಗಳು ತಪ್ಪದೇ ವಿವಾಹ ಸಮಾರಂಭಕ್ಕೆ ಆಗಮಿಸಬೇಕು ಎಂದು ತಿಳಿಸಲಾಗಿದೆ.
ಟ್ಯಾಬ್ಲೆಟ್ ಕಾರ್ಡ್ ಮಾದರಿಯಲ್ಲಿ ಮುದ್ರಿಸುವ ಈ ಆಮಂತ್ರಣ ಪತ್ರಿಕೆಯಲ್ಲಿ ಎಹಿಲರಸನ್ ಮತ್ತು ವಸಂತಕುಮಾರಿ ವೆಡ್ಡಿಂಗ್ ಎಂದು ಮೇಲುಗಡೆ ಮತ್ತು ಕೆಳಗಡೆ ದೊಡ್ಡ ಅಕ್ಷರದಲ್ಲಿದೆ. ಎಡ ಭಾಗದಲ್ಲಿ ಇಬ್ಬರ ಶಿಕ್ಷಣದ ವಿವರಗಳಿದ್ದರೆ, ಬಲಭಾಗದಲ್ಲಿ ನೀಲಿ ಬಣ್ಣದಲ್ಲಿ ಮದುವೆ ದಿನಾಂಕ ಮತ್ತು ಮುಹೂರ್ತ ಹಾಗೂ ಆರತಕ್ಷತೆ ಸಮಯವನ್ನು ಮುದ್ರಿಸಲಾಗಿದೆ. ಮ್ಯಾನುಫ್ಯಾಕ್ಚರ್ ವಿಭಾಗದಲ್ಲಿ ವರನ ತಂದೆ-ತಾಯಿ ಹಾಗೂ ವಧುವಿನ ತಂದೆ-ತಾಯಿ ಹೆಸರಿನೊಂದಿಗೆ ಅವರ ವಿಳಾಸ ಕೂಡ ಇದೆ.
ಟ್ಯಾಬ್ಲೆಟ್ ಕಾರ್ಡ್ಗಳಲ್ಲಿ ವೈದ್ಯರ ಸಲಹೆಯಿಲ್ಲದೆ ಅಥವಾ ಸೂರ್ಯನ ಶಾಖದಲ್ಲಿಟ್ಟು ಸೇವಿಸಬಾರದು ಎಂಬ ವಾರ್ನಿಂಗ್ ಅಥವಾ ಎಚ್ಚರಿಕೆ ಅನ್ನೋದು ಕಡ್ಡಾಯವಾಗಿ ಇರುತ್ತದೆ. ಈ ವಾರ್ನಿಂಗ್ ಸ್ಥಳದಲ್ಲಿ ಎಲ್ಲ ಸ್ನೇಹಿತರೇ ಮತ್ತು ಬಂಧುಗಳೇ ನಮ್ಮ ವಿವಾಹ ಸಮಾರಂಭವನ್ನು ಮಿಸ್ ಮಾಡಬೇಡಿ ಎಂದು ಕೆಂಪು ಅಕ್ಷರದಲ್ಲಿ ಹಾಕಿಸಿದ್ದಾರೆ. ಮತ್ತೊಂದು ವಿಶೇಷವೆಂದರೆ ಈ ಆಮಂತ್ರಣ ಕಾರ್ಡ್ನಲ್ಲಿ ಮದುವೆಯ ದಿನದ ವಿಶೇಷ ದಿನಗಳನ್ನೂ ಸ್ಮರಿಸಲಾಗಿದೆ. ಅಂದು ಶಿಕ್ಷಕರ ದಿನ ಹಾಗೂ ಮದರ್ ತೆರೇಸಾ ಸ್ಮರಣೆ ದಿನವಿದೆ ಎಂದೂ ಮುದ್ರಿಸಲಾಗಿದೆ.
ಒಟ್ಟಾರೆ, ಮಾತ್ರೆ ಶೀಟ್ ಮಾದರಿಯ ಈ ಮದ್ವೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಯ ಕ್ರಿಯೆಟಿವಿಗೆ ಶ್ಲಾಘನೆ ವ್ಯಕ್ತಪಡಿಸುವ ಮೂಲಕ ಶುಭ ಕೋರುತ್ತಿದ್ದಾರೆ.