ಬಿಜೆಪಿಗೆ ಅಲ್ಪಸಂಖ್ಯಾತರು ಸತ್ತರೆ ಓಟು ಬರುವುದಿಲ್ಲ, ಹಿಂದೂಗಳು ಸಾಯಬೇಕು: ರಮಾನಾಥ್ ರೈ
ಮಾಜಿ ಸಿಎಂ ಸಿದ್ದರಾಮಯ್ಯ ಕೊಡಗಿಗೆ ಮಳೆಹಾನಿ ವೀಕ್ಷಿಸಲೆಂದು ತೆರಳಿದ ಸಂದರ್ಭದಲ್ಲಿ ಕಾರಿಗೆ ಮೊಟ್ಟೆ ಎಸೆದ ಘಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಖಂಡಿಸಿದೆ. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವ ಬಿ.ರಮನಾಥ್ ರೈ ಅವರು ಮಾತನಾಡುತ್ತಾ, “ಹಿಂದೂಗಳ ಹತ್ಯೆ ಆದರೆ ಬಿಜೆಪಿಗೆ ಲಾಭ. ಬಿಜೆಪಿ ಪಕ್ಷ ಬಂದಾಗಿನಿಂದ ಕೊಲೆಗಳು ಹೆಚ್ಚಾಗಿ ನಡೆಯುತ್ತಿವೆ. ಬಿಜೆಪಿಯಲ್ಲಿರುವ ಸುಮಾರು ಜನ ಹತ್ಯೆಯ ಆರೋಪಿಗಳು ಆಗಿದ್ದಾರೆ. ನಂತರದ ಆರೋಪಿಗಳ ಸ್ಥಾನದಲ್ಲಿ ಎಸ್‌ಡಿಪಿಐಯವರು ಇದ್ದಾರೆ. ಹರೀಶ್ ಪೂಜಾರಿ, ಬಾಳಿಗಾ ಅವರ ಹತ್ಯೆಯ ಆರೋಪಿಗಳು ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಈ ಕೊಲೆಗಳ ಹಿಂದಿರುವ ಸೂತ್ರದಾರರನ್ನು ಪತ್ತೆ ಮಾಡುವ ಕೆಲಸ ಆಗಬೇಕಿದೆ ಎಂದು ರಮಾನಾಥ್ ರೈ ಗುಡುಗಿದರು.
“ಹಿಂಸೆಯನ್ನು ಬೆಂಬಲಿಸುವ ಪಕ್ಷ ಕಾಂಗ್ರೆಸ್ ಅಲ್ಲ. ಮತೀಯ ವಾದಿಗಳು ಪರಾಕಷ್ಠೆ ಮೆರೆದಿದ್ದು, ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆದಿದ್ದಾರೆ.ಒಂದು ಪ್ರಮುಖ ಸ್ಥಾನದಲ್ಲಿರುವ ಸಿದ್ಧರಾಮಯ್ಯನವರ ವಿರುದ್ಧ ನಡೆದ ಈ ಕೃತ್ಯಕ್ಕೆ ಜಿಲ್ಲಾ ಕಾಂಗ್ರೆಸ್ ಖಡಾಖಂಡಿತವಾಗಿ ಖಂಡಿಸುತ್ತದೆ. ಹಾಗೆ ನೋಡಿದರೆ ರಾಜ್ಯದಲ್ಲಿ ಸುಮಾರು ಹತ್ಯೆಗಳಾಗಿವೆ. ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿ ಕೂಡಾ ಆಗಿದೆ. ಆದರೆ ಹತ್ಯೆಯಾಗಿರುವ ಪ್ರಕರಣಗಳಲ್ಲಿ ನಮ್ಮ ಕಾಂಗ್ರೆಸ್‌ನ ಕಾರ್ಯಕರ್ತರು ಯಾರು ಆರೋಪಿಗಳಿಲ್ಲ” ಎಂದು ರಮಾನಾಥ್ ರೈ ಹೇಳಿದರು.
ಅಲ್ಪಸಂಖ್ಯಾತರು ಸತ್ತರೆ ಬಿಜೆಪಿಗೆ ಓಟು ಬರುವುದಿಲ್ಲ. ಹಿಂದೂಗಳು ಸಾಯಬೇಕು, ಅದರಲ್ಲೂ ಬಿಲ್ಲವ ಸಾಯಬೇಕು, ಅದಕ್ಕಾಗಿಯೇ ಹರೀಶ್ ಪೂಜಾರಿ ಕೊಲೆ ಆಯ್ತು. ಕೊಲೆ ಮಾಡಿದ ಕಾರ್ಯಕರ್ತರು ತುಂಬಿರುವ ಬಿಜೆಪಿ ಪಕ್ಷಕ್ಕೆ ಓಟು ಕೊಟ್ಟ ಎಲ್ಲರಿಗೂ ದೋಷ ಬರುತ್ತದೆ. ಘರ್ಷಣೆ, ಗಲಾಟೆ ಆಗದಂತೆ ನೋಡಿಕೊಳ್ಳಬೇಕು ಎನ್ನುವ ಉದ್ದೇಶ ಕಾಂಗ್ರೆಸ್ ಪಕ್ಷದ್ದು ಎಂದು ರಮಾನಾಥ್ ರೈ ಹೇಳಿದರು.
“ಯಾರು ಈಗ ಆರೋಪಿ ಸ್ಥಾನದಲ್ಲಿದ್ದಾರೋ ಅವರ ಸೂತ್ರದಾರರಿಗೆ ಶಿಕ್ಷೆ ನೀಡಬೇಕು. ಆಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಲಾಟೆ ಸಂಪೂರ್ಣ ನಿಂತು ಹೋಗಲು ಸಾಧ್ಯ. ಹಿಂದುಳಿದ ವರ್ಗದ ಯುವಕರು ಆರೋಪಿ ಸ್ಥಾನದಲ್ಲಿ ಇದ್ದಾರೆ. ಇದರ ಸೂತ್ರದಾರರು ಯಾವುದೇ ಚಿಂತೆ ಇಲ್ಲದೆ ತಿರುಗಾಡುತ್ತಿದ್ದಾರೆ. ಆದ್ದರಿಂದ ಸೂತ್ರದಾರಿಗಳನ್ನು ಮೊದಲು ಬಂಧಿಸಿ” ಎಂದು ಎಡಿಜಿಪಿ ಅಲೋಕ್ ಕುಮಾರ್‌ಗೆ ಸಲಹೆ ನೀಡಿದ್ದಾರೆ.