BIGG NEWS : ಮಾಜಿ ಸಿಎಂ ʻ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ʼ : ಬಿಜೆಪಿ- ಕಾಂಗ್ರೆಸ್ ಪ್ರತಿಭಟನೆ!
ಕೊಡಗು : ಮಳೆ ಹಾನಿ ವೀಕ್ಷಣೆಗೆಂದು ಹೋದ ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಬಿಜೆಪಿಯ ಕಾರ್ಯಕರ್ತರು ತೀವ್ರ ಪ್ರತಿಭಟನೆ ಮಾಡಿದ್ದಾರೆ. ಕಳೆದ 15 ದಿನಗಳಿಂದ ಕೊಡಗಿನಲ್ಲಿ ಭಾರೀ ಮಳೆ ಸುರಿದಿದ್ದು, ಈ ಕಾರಣದಿಂದ ಬೆಳೆಹಾನಿಯ ಪ್ರದೇಶವನ್ನು ವೀಕ್ಷಣೆ ಮಾಡಲು ಮಧ್ಯಾಹ್ನ ತಿಮ್ಮಯ್ಯ ಸರ್ಕಲ್‌ಗೆ ಮಾಜಿ ಸಿಎಂ ಸಿದ್ದರಾಮಯ್ಯ ಬಂದಾಗ, ಕೊಡಗಿನ ಗಡಿ ಭಾಗದ ಪೋನ್ನಂಪೇಟೆ ತಾಲೂಕಿನ ತಿತಿಮತಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡುವ ಮೂಲಕ ಪ್ರತಿಭಟನೆ ಮಾಡಿದರು.
ಅಷ್ಟು ಮಾತ್ರವಲ್ಲದೇ, ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೇಲೆ ಮೊಟ್ಟೆ ಎಸೆದಿದ್ದಾರೆ. ಬಳಿಕ ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡದಿತ್ತು. ಹಾಗಾಗಿ ತಿಮ್ಮಯ್ಯ ಸರ್ಕಲ್‌ನಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.
ಸಿದ್ದರಾಮಯ್ಯ ಅವರಿದ್ದ ಕಾರನ್ನು ಅಡ್ಡಗಟ್ಟಿ ಸಾವರ್ಕರ್ ಭಾವಚಿತ್ರವನ್ನು ಕಾರಿನೊಳಕ್ಕೆ ಹಾಕಿ, ಕಪ್ಪು ಬಾವುಟ ಪ್ರದರ್ಶಿಸಿ `ಗೋ ಬ್ಯಾಕ್ ಸಿದ್ದುಖಾನ್, ಗೋ ಬ್ಯಾಕ್ ಸಿದ್ದರಾಮಯ್ಯ’ ಘೋಷಣೆ ಕೂಗಿದರು. ರಾಜ್ಯದಲ್ಲಿ ಮತಾಂಧ ಟಿಪ್ಪುವಿನ ಜಯಂತಿ ಆಚರಣೆ ಜಾರಿಗೆ ತಂದು ಅಮಾಯಕರ ಕೊಲೆಗೆ ಕಾರಣರಾದ ಟಿಪ್ಪು ಭಕ್ತ ಸಿದ್ದರಾಮಯ್ಯ ಕೊಡಗಿಗೆ ಕಾಲಿಡುವುದರಿಂದ ಮತ್ತೆ ಕೊಡಗಿನ ಶಾಂತಿ ಭಂಗವಾಗಲಿದೆ. ಅಷ್ಟೇ ಅಲ್ಲದೇ ಕೊಡವರನ್ನು ಗೋಮಾಂಸ ಭಕ್ಷಕರೆಂದು ಬಿಂಬಿಸಿದ್ದಾರೆ. ಹಿಂದೂ ವಿರೋಧಿ ಸಿದ್ದರಾಮಯ್ಯ ಕೊಡಗಿಗೆ ಕಾಲಿಡಲು ಅಯೋಗ್ಯರಾಗಿದ್ದಾರೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರ ಈ ರೀತಿಯ ಪ್ರತಿಭಟನೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಇದು ಹೇಡಿಗಳು ಮಾಡುವ ಪ್ರತಿಭಟನೆ. ಅಷ್ಟು ಮಾತ್ರವಲ್ಲದೇ, ಕೊಡಗಿನ ಎಲ್ಲಾ ಕಡೆ ಬಿಜೆಪಿಯವರು ಕಳಪೆ ಕಾಮಗಾರಿ ಮಾಡಿದ್ದಾರೆ. ಇದನ್ನು ನನಗೆ ನೋಡಲು ಬಿಡಬಾರದು ಎಂದು ಪ್ರತಿಭಟನೆ ಮಾಡಿದ್ದಾರೆ. ಬಿಜೆಪಿ ದುಡ್ಡು ಕೊಟ್ಟು ಜನರನ್ನು ಕರೆತಂದು ಪ್ರತಿಭಟನೆ ಮಾಡಿಸಿದೆ ಎಂದು ಆರೋಪಿಸಿದರು.
ಇನ್ನೂ ಮುಂದುವರಿದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಕೊಡಗಿನ ಎರಡು ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಲಿದೆ. ನಮ್ಮ ಕಾರ್ಯಕರ್ತರು ಮನಸು ಮಾಡಿದರೆ ಕೊಡಗಿನಲ್ಲಿ ಬಿಜೆಪಿಯ ಯಾವ ಮಿನಿಸ್ಟರ್ ಕೂಡ ಓಡಾಡುವುದಕ್ಕೆ ಬಿಡಲ್ಲ. ಆದರೆ ಅದು ನಮ್ಮ ಸಂಸ್ಕೃತಿ ಅಲ್ಲ. ಬಿಜೆಪಿಯವರನ್ನು ಜನರೇ ಸೋಲಿಸಲಿದ್ದಾರೆ ಅಂತಾ ಎಚ್ಚರಿಸಿದರು.
ಒಂದೆಡೆ ಬಿಜೆಪಿ ಕಾರ್ಯಕರ್ತರಿಂದ ಗಲಾಟೆ ಮಾಡುತ್ತಿದ್ದರೆ, ಇನ್ನೊಂದು ಕಡೆ, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಬಿಜೆಪಿಯವರ ನಡೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಮುಖಂಡ ಎ.ಎಸ್.ಪೊನ್ನಣ್ಣ ಜೊತೆ ಮಾತುಕತೆ ನಡೆಸಿದ ಎಸ್ಪಿ ಅಯ್ಯಪ್ಪ ಕಾಂಗ್ರೆಸ್ ಕಾರ್ಯಕರ್ತರ ಮನವೊಲಿಸುವಲ್ಲಿ ಸಫಲರಾಗಿದ್ದಾರೆ.