ಮಂಗಳೂರಿನ ರಾಖಿ ಘಟನೆ ಮಾಸುವ ಮುನ್ನವೇ, ರಾಜ್ಯದ ಮತ್ತೊಂದು ಶಾಲೆಯಲ್ಲಿ ರಾಖಿ ಬಿಚ್ಚಿಸಿದ ಕಾನ್ವೆಂಟ್ ಸ್ಕೂಲ್| ಹಿಂದೂ ಸಂಘಟನೆಗಳ ತೀವ್ರ ಪ್ರತಿಭಟನೆ

Share the Article

ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ಶಾಲಾ ಮಕ್ಕಳ ಕೈಯಿಂದ ರಾಖಿ ಬಿಚ್ಚಿಸಿ ಕಸದ ಬುಟ್ಟಿಗೆ ಹಾಕಿದ ಘಟನೆಯೊಂದು ಮಾಸುವ ಮೊದಲೇ, ಇಲ್ಲೊಂದು ಕಡೆ ಖಾಸಗಿ ಶಾಲೆಯೊಂದು ದರ್ಪ ತೋರಿದ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡದ ಕರಗಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ. ನಿನ್ನೆ ಕರಗಿನ ಕೊಪ್ಪದ ಲೊಯೋಲಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬೆಳಗ್ಗೆ ಪ್ರಾರ್ಥನೆ ನಡೆದ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿ ಹಾಗೂ ಶಿಕ್ಷಕರು ವಿದ್ಯಾರ್ಥಿಗಳ ಕೈಯಿಂದ ರಾಖಿ ಬಿಚ್ಚಿಸಿದ್ದರು.

ವಿದ್ಯಾರ್ಥಿಗಳು ಶಾಲೆಯಲ್ಲಿ ನಡೆದ ಈ ಘಟನೆಯನ್ನು ಪೋಷಕರಿಗೆ ತಿಳಿಸಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳ ಪೋಷಕರು, ಹಿಂದೂ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಇಂದಿ ಶಾಲೆಗೆ ಬಂದಿದ್ದಾರೆ. ನಂತರ ಶಾಲೆಯ ಮುಂಭಾಗ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ, ಲೊಯೋಲಾ ಶಿಕ್ಷಣ ಸಂಸ್ಥೆಯ ವಿರುದ್ಧ ವಿದ್ಯಾರ್ಥಿಗಳ ಪೋಷಕರು ಹಾಗೂ ಹಿಂದು ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಕ್ರಮಕ್ಕೆ ಒತ್ತಾಯಿಸಿದ್ದಲ್ಲದೇ, ಲೊಯೋಲಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯಸ್ಥರ ಜತೆ ಮಾತಿನ ಚಕಮಕಿಯೂ ನಡೆದಿದೆ. ವಿಷಯವನ್ನು ಅರಿತ ಮುಂಡಗೋಡ ಪೊಲೀಸರು ಹಾಗೂ ಬಿಇಒ ಸ್ಥಳಕ್ಕೆ ದೌಡಾಯಿಸಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಯತ್ನಿಸಿದ್ದಾರೆ.

ಶಾಲಾ ಆಡಳಿತ ಮಂಡಳಿಯವರು ಸರ್ಕಾರದ ನಿಯಮದಂತೆ ನಡೆದುಕೊಳ್ಳಬೇಕು ಎಂದು ಬಿಇಒ ಸೂಚನೆ ನೀಡಿದೆ. ಈ ಹಿನ್ನೆಲೆ ಕೊನೆಗೆ ಲೋಯೊಲಾ ಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯಸ್ಥರು ಕ್ಷಮೆ ಕೇಳಿದ್ದಾರೆ. ಸಂಸ್ಥೆಯ ಮುಖ್ಯಸ್ಥರು ಕ್ಷಮೆ ಕೇಳಿದ ನಂತರ ಹಿಂದೂಪರ ಸಂಘಟನೆಗಳು, ಪೋಷಕರು ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಮಂಗಳೂರಿನ ಶಾಲೆಯೊಂದರಲ್ಲಿ ಕೂಡಾ ಇಂತದ್ದೇ ಘಟನೆ ನಡೆದಾಗ, ಮಕ್ಕಳ ಕೈಯಲ್ಲಿದ್ದ ರಾಕಿಯನ್ನು ಶಿಕ್ಷಕಿ ಬಿಚ್ಚಲು ಹೇಳಿದಾಗ, ಪೋಷಕರು ಹಾಗೂ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು, ನಂತರ ಶಾಲಾಡಳಿತ ಮಂಡಳಿ ಕ್ಷಮೆ ಕೇಳಿ ಪ್ರಕರಣ ಸುಖಾಂತ್ಯಗೊಂಡಿತ್ತು.

Leave A Reply