ಮನೆ ಕಟ್ಟಲು ಮರಳಿನ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ | ಮೊಬೈಲ್ ಆಪ್ ಮೂಲಕ ಆರ್ಡರ್ ಮಾಡಿದ್ರೆ ಮನೆ ಬಾಗಿಲಿಗೆ ತಲುಪುತ್ತೆ ಮರಳು
ಬೆಂಗಳೂರು: ಮನೆ ಕಟ್ಟಲು ಮರಳಿನ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿಯೊಂದಿದ್ದು, ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಿದೆ. ಮರಳು ಮಾಫಿಯಾ ಬಗ್ಗು ಬಡಿಯಲು ಜಾರಿಗೆ ತಂದಿರುವ ಮರಳು ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಜನವರಿಯಿಂದ ಸಾರ್ವಜನಿಕರಿಗೆ ಸುಲಭವಾಗಿ ಮರಳು ಸಿಗುವಂತೆ ಮಾಡಲು ಸರ್ಕಾರ ಮುಂದಾಗಿದೆ.
ಮರಳಿನ ಕೊರತೆ ನೀಗಿಸಲು ಎಂ ಸ್ಯಾಂಡ್ ಬಳಕೆ ಹೆಚ್ಚಳಕ್ಕೆ ನೀತಿಗೆ ತಿದ್ದುಪಡಿ ತರುವ ಮಹತ್ವದ ತೀರ್ಮಾನ ಮಾಡಿದೆ. ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್, ಎಂ ಸ್ಯಾಂಡ್ಗೆ ಪ್ರೋತ್ಸಾಹ ನೀಡಲು ಅಧಿಕೃತ ಕ್ರಷರ್ಗಳಿಗೆ ಹೆಚ್ಚಿನ ಉತ್ತೇಜನಕ್ಕೆ ನೀತಿಯಲ್ಲಿ ಗಮನ ಹರಿಸಲಾಗುವುದು. ಮುಂದಿನ ಅಧಿವೇಶನದ ವೇಳೆಗೆ ತಿದ್ದುಪಡಿ ತರಲಾಗುವುದು ಎಂದು ವಿವರಿಸಿದರು. ಎಂ ಸ್ಯಾಂಡ್ ಬಳಕೆ ಪ್ರೋತ್ಸಾಹಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳು ಹಾಗೂ ತಜ್ಞರ ಜತೆ ಚರ್ಚೆ ನಡೆಸಲಾಗುವುದು ಎಂದರು.
ರಾಜ್ಯದಲ್ಲಿ ವಾರ್ಷಿಕವಾಗಿ ಮರಳು 45 ದಶಲಕ್ಷ ಟನ್ ನಷ್ಟಿದ್ದು, 35 ದಶಲಕ್ಷ ಟನ್ ಮರಳಷ್ಟೇ ಪೂರೈಕೆಯಾಗುತ್ತಿದೆ. ಹೀಗಾಗಿ ಉಳಿದ ಬೇಡಿಕೆಯನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಎಂ-ಸ್ಯಾಂಡ್ ಗೆ ಉತ್ತೇಜಿಸೋ ಸಲುವಾಗಿ ಮರಳು ನೀತಿಯನ್ನು ತಿದ್ದುಪಡಿ ಮಾಡಲಾಗುತ್ತದೆ ಎಂದರು.
ನೂತನ ಮರಳು ನೀತಿ ಜಾರಿಗೆ ಬಂದ ನಂತರ, ನದಿ, ತೊರೆ, ಝುರಿಗಳಲ್ಲಿ ಮರಳು ಗಣಿಗಾರಿಕೆ ಹಾಗೂ ಮಾರಾಟಕ್ಕೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಹಟ್ಟಿ ಚಿನ್ನದ ಗಣಿ ಹಾಗೂ ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮಗಳ ಮೂಲಕ ವ್ಯವಸ್ಥೆ ಮಾಡಲಾಗುತ್ತದೆ. ಹಟ್ಟಿ ಚಿನ್ನದ ಗಣಿಗೆ 15 ಜಿಲ್ಲೆಗಳು ಹಾಗೂ ಖನಿಜ ನಿಗಮಕ್ಕೆ 16 ಜಿಲ್ಲೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಎರಡು ಸಂಸ್ಥೆಗಳು ಮರಳು ಬ್ಲಾಕ್ಗಳನ್ನು ಗುರುತಿಸಿ ಗಣಿಗಾರಿಕೆ ನಡೆಸಲಿವೆ. ಮಾರಾಟಕ್ಕೂ ಪ್ರತಿ ಜಿಲ್ಲೆಯಲ್ಲಿಯೂ ವ್ಯವಸ್ಥೆ ಮಾಡಿಕೊಳ್ಳುತ್ತವೆ. ಇದರಿಂದ ಮರಳು ಮಾಫಿಯಾಕ್ಕೆ ಕಡಿವಾಣ ಬೀಳಲಿದೆ ಎಂದು ಸಚಿವ ಹಾಲಪ್ಪ ಆಚಾರ್ ಅಭಿಪ್ರಾಯಪಟ್ಟರು.
ಲಭ್ಯ ಮರಳನ್ನು ಆಯಾ ಸಂಸ್ಥೆಗಳು ಆಯಾ ಜಿಲ್ಲೆಗಳಲ್ಲಿ ಜನವರಿಯಿಂದ ಯಾವುದೇ ಸಮಸ್ಯೆಯಾಗದಂತೆ ಮಾರಾಟ ಮಾಡಲಿವೆ. ಪ್ರತಿ ಟನ್ಗೆ 800 ರೂ. ನಿಗದಿ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಹಳ್ಳ, ತೊರೆಗಳಲ್ಲಿ ಸಿಗುವ ಮರಳಿಗೆ ಟನ್ಗೆ -ಠಿ;300 ದರ ಇರುತ್ತದೆ ಎಂದು ಹೇಳಿದರು.
ಮರಳು ಮಾರಾಟಕ್ಕೆ ಸಂಬಂಧಿಸಿ ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗಿದೆ. ಮರಳು ಎಲ್ಲಿ ಲಭ್ಯವಾಗುತ್ತದೆ ಎಂಬುದನ್ನು ಈ ಮೂಲಕ ತಿಳಿಯಬಹುದು. ಹಣ ಪಾವತಿಸಿದರೆ ಮನೆ ಬಾಗಿಲಿಗೆ ಸರಬರಾಜು ಮಾಡುವ ವ್ಯವಸ್ಥೆಯೂ ಜಾರಿಗೆ ಬರಲಿದೆ ಎಂದರು.