ಮಂಗಳೂರಿನ 16 ಫಿಶ್ ಮಿಲ್ ಘಟಕಗಳ ಸ್ಥಗಿತಕ್ಕೆ ಆದೇಶ.!

ಮಂಗಳೂರು: ಮಂಗಳೂರಿನಲ್ಲಿ 16 ಫಿಶ್ ಮಿಲ್ ಘಟಕಗಳ ಸ್ಥಗಿತಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಆದೇಶ ಹೊರಡಿಸಿದೆ.

 

ತೀವ್ರ ಪರಿಸರ ಮಾಲಿನ್ಯದ ಕುರಿತು ಸಾರ್ವಜನಿಕರ ದೂರು ಹಿನ್ನೆಲೆಯಲ್ಲಿ ಪದೇ ಪದೇ ನೋಟಿಸ್ ಕೊಟ್ಟು ಮಾಲಿನ್ಯ ತಗ್ಗಿಸಲು ಮಂಡಳಿ ಸೂಚಿಸಿತ್ತು.

ಮಂಡಳಿ ನೋಟಿಸ್‌ಗೆ ಫಿಶ್ ಮಿಲ್ ಘಟಕಗಳ ಮಾಲೀಕರು ನಿರ್ಲಕ್ಷ್ಯ ವಹಿಸಿದ್ದರು. ಮಲಿನ ನೀರನ್ನು ನೇರವಾಗಿ ಸಮುದ್ರಕ್ಕೆ ಬಿಡುತ್ತಿದ್ದರಿಂದ ಗಬ್ಬು ವಾಸನೆ ಹೊಡೆಯುತ್ತಿದೆ. ಹೀಗಾಗಿ ಈಗ ಮಾಲಿನ್ಯ ಮಂಡಳಿ ಈ ಆದೇಶ ಹೊರಡಿಸಿದೆ.

ಅಸಹ್ಯ ವಾಸನೆಯಿಂದಾಗಿ ಪರಿಸರದ ಜನರಿಗೆ ವಾಸಕ್ಕೆ ಕಷ್ಟವಾಗಿತ್ತು. ಈ ಬಗ್ಗೆ ಪ್ರಾದೇಶಿಕ ಪರಿಸರ ನಿಯಂತ್ರಣ ಮಂಡಳಿಗೆ ಸಾರ್ವಜನಿಕರು ದೂರು ನೀಡಿದ್ದರು. ದೂರಿನ ಹಿನ್ನೆಲೆ ಬಯೋ ಫಿಲ್ಟರ್ ಅಳವಡಿಸಲು ಪರಿಸರ ನಿಯಂತ್ರಣ ಮಂಡಳಿ ಸೂಚಿಸಿತ್ತು.

ಕಳೆದ ಜುಲೈನಲ್ಲಿ ಅಂತಿಮ ಗಡುವು ನೀಡಿ ನೋಟಿಸ್ ನೀಡಿತ್ತು. ಆದರೆ ಪರಿಸರ ಮಾಲಿನ್ಯ ತಪ್ಪಿಸಲು ಕಾರ್ಖಾನೆಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅಷ್ಟು ಮಾತ್ರವಲ್ಲದೇ, ಯಾವುದೇ ವಿಚಾರಣೆಗೂ ಹಾಜರಾಗದ ಕಾರಣ 16 ಘಟಕಗಳ ಬಂದ್ ಮಾಡಲು ಜಿಲ್ಲಾಧಿಕಾರಿಗೆ, ಮೆಸ್ಕಾಂ ಎಂಡಿಗೆ ಕಾರ್ಖಾನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಸೂಚನೆ ನೀಡಲಾಗಿತ್ತು. ಮಂದಿನ ಆದೇಶದ ವರೆಗೆ ಘಟಕ ಸ್ಥಗಿತಗೊಳಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ. ಬರಾಕಾ ಸೇರಿದಂತೆ ಉಳ್ಳಾಲ, ಸುರತ್ಕಲ್, ಬೈಕಂಪಾಡಿ, ಮುಕ್ಕದಲ್ಲಿರುವ 16 ಫಿಶ್ ಮಿಲ್ ಗಳನ್ನು ಸ್ಥಗಿತಗೊಳಿಸಲು ಆದೇಶ ಮಾಡಿದೆ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಈ ಬಗ್ಗೆ ಆದೇಶದ ಪ್ರತಿ ಬಂದಿದ್ದು, ಕೂಡಲೇ ಬಂದ್‌ ಮಾಡುವಂತೆ ಸೂಚಿಸಲಾಗಿದೆ. ಅಲ್ಲದೆ, ಕಾವೂರಿನಲ್ಲಿ ಕಚೇರಿ ಹೊಂದಿರುವ ಮೆಸ್ಕಾಂ ಎಂಡಿಗೂ ಸದ್ರಿ ಫಿಶ್ ಮಿಲ್ ಗಳಿಗೆ ಒದಗಿಸಿರುವ ವಿದ್ಯುತ್ತನ್ನಿ ಕಡಿತಗೊಳಿಸುವಂತೆ ಸೂಚನೆ ನೀಡಲಾಗಿದೆ.

Leave A Reply

Your email address will not be published.