ನಾಯಿಯಲ್ಲೂ ಪತ್ತೆಯಾಯ್ತು ‘ಮಂಕಿಪಾಕ್ಸ್’ | ನಿಮ್ಮ ನಾಯಿಗೂ ಈ ಲಕ್ಷಣ ಇದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ!
ಮಾನವರಲ್ಲಿ ಮಂಕಿಪಾಕ್ಸ್ ಪ್ರಕರಣ ಏರಿಕೆಯ ನಡುವೆ ಮತ್ತೊಂದು ಶಾಕಿಂಗ್ ಸುದ್ದಿ ಹೊರ ಬಿದ್ದಿದ್ದು, ನಾಯಿಗೂ ಸೋಂಕು ದೃಢ ಪಟ್ಟಿರುವ ವರದಿ ಬಂದಿದೆ.
ಹೌದು. ಮಂಕಿಪಾಕ್ಸ್ ವೈರಸ್ ಮಾನವನಿಂದ ಸಾಕುಪ್ರಾಣಿಗಳಿಗೆ ಹರಡುವ ಮೊದಲ ಶಂಕಿತ ಪ್ರಕರಣದ ಸಾಕ್ಷ್ಯವನ್ನು ಪ್ರಮುಖ ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ ಪ್ರಕಟಿಸಿದೆ. ದಿ ಲ್ಯಾನ್ಸೆಟ್ ಪ್ರಕಾರ, ವೈರಸ್ ಸೋಂಕಿಗೆ ಒಳಗಾದ ಫ್ರಾನ್ಸ್ ನ ಇಬ್ಬರು ವ್ಯಕ್ತಿಗಳ ಜೊತೆಗಿದ್ದ ನಾಯಿಗೂ ಮಂಕಿಪಾಕ್ಸ್ ಲಕ್ಷಣ ಕಾಣಿಸಿಕೊಂಡಿದೆ. ನಾಯಿಗೆ 12 ದಿನಗಳ ನಂತರ ರೋಗಲಕ್ಷಣ ಕಾಣಿಸಿಕೊಂಡಿದೆ.
ಈ ಹಿಂದೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದ 4 ವರ್ಷದ ಗಂಡು ಇಟಾಲಿಯನ್ ಗ್ರೇಹೌಂಡ್ ತಳಿಯ ನಾಯಿಗೆ ಮಂಕಿಪಾಕ್ಸ್ ಲಕ್ಷಣ ಕಾಣಿಸಿಕೊಂಡಿದೆ. ನಾಯಿಯ ಹೊಟ್ಟೆಯ ಮೇಲೆ ಗಾಯಗಳು ಕಾಣಿಸಿಕೊಂಡಿದ್ದು ಪರೀಕ್ಷಿಸಿದಾಗ ಪಾಸಿಟಿವ್ ಬಂದಿದೆ. ಡಿಎನ್ಎ ಪರೀಕ್ಷೆಯ ಮೂಲಕ ಸಂಶೋಧಕರು ಇಬ್ಬರು ಪುರುಷರಿಗೆ ಸೋಂಕು ತಗುಲಿರುವ ವೈರಸ್ಗಳು ಮತ್ತು ನಾಯಿಯಲ್ಲಿ ಪತ್ತೆಯಾದ ವೈರಸ್ ಎರಡೂ ಒಂದೇ ಎಂದು ನಿರ್ಧರಿಸಿದ್ದಾರೆ. ಮೊದಲು ಮಂಕಿಪಾಕ್ಸ್ ತಗುಲಿದ್ದ ಇಬ್ಬರು ವ್ಯಕ್ತಿಗಳ ಬೆಡ್ ಮೇಲೆ ನಾಯಿಯೂ ಸಹ ಮಲಗಿತ್ತು. ಇದೇ ಕಾರಣಕ್ಕೆ ನಾಯಿಗೂ ಮಂಕಿಪಾಕ್ಸ್ ತಗುಲಿರಬಹುದು ಎಂದು ಅಂದಾಜಿಸಲಾಗಿದೆ.
ನಮ್ಮ ಸಂಶೋಧನೆಗಳು ಮಂಕಿಪಾಕ್ಸ್ ವೈರಸ್ ಪಾಸಿಟಿವ್ ಬಂದಿರುವ ವ್ಯಕ್ತಿಗಳಿಂದ ಸಾಕುಪ್ರಾಣಿಗಳನ್ನು ಪ್ರತ್ಯೇಕಿಸುವ ಅಗತ್ಯತೆಯ ಬಗ್ಗೆ ಚರ್ಚೆಯನ್ನು ಪ್ರೇರೇಪಿಸಬೇಕು ಎಂದು ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ ವರದಿ ಉಲ್ಲೇಖಿಸುತ್ತದೆ. ಸೋಂಕಿತ ಪ್ರಾಣಿಗಳು ಮಂಕಿಪಾಕ್ಸ್ ವೈರಸ್ ಅನ್ನು ಜನರಿಗೆ ಹರಡಬಹುದು. ಸೋಂಕಿಗೆ ಒಳಗಾದ ಜನರು ನಿಕಟ ಸಂಪರ್ಕದ ಮೂಲಕ ಪ್ರಾಣಿಗಳಿಗೆ ಮಂಕಿಪಾಕ್ಸ್ ವೈರಸ್ ಹರಡುವ ಸಾಧ್ಯತೆಯಿದೆ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ ಈಮುನ್ನೇ ಎಚ್ಚರಿಕೆ ನೀಡಿತ್ತು.
ಸಾಕುಪ್ರಾಣಿಗಳಲ್ಲಿ ಮಂಕಿಪಾಕ್ಸ್ನ ಸಂಪೂರ್ಣ ಲಕ್ಷಣಗಳ ಕುರಿತು ಇನ್ನೂ ಸಂಪೂರ್ಣ ಅಧ್ಯಯನ ನಡೆಯಬೇಕಿದೆ. ಆಲಸ್ಯ, ಹಸಿವಿನ ಕೊರತೆ, ಕೆಮ್ಮು, ಮೂಗಿನ ಸ್ರವಿಸುವಿಕೆ ಅಥವಾ ಹೊರಪದರ, ಉಬ್ಬುವುದು, ಜ್ವರ ಅಥವಾ ಮೊಡವೆ ಅಥವಾ ಗುಳ್ಳೆಗಳಂತಹ ಚರ್ಮದ ದದ್ದುಗಳು ಅನಾರೋಗ್ಯದ ಸಂಭಾವ್ಯ ಚಿಹ್ನೆಗಳು ಆಗಿರುವ ಸಾಧ್ಯತೆಯಿದೆ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ ಎಚ್ಚರಿಕೆ ನೀಡಿದೆ.