BIG NEWS । ಭಾರತದಲ್ಲಿ ಪ್ರತಿ 100 ರಲ್ಲಿ 21 ಜನರ ಬಳಿ ತಿರಂಗಾ ಪಟಪಟ ! ಬರೋಬ್ಬರಿ 500 ಕೋಟಿ ರೂ. ಧ್ವಜಗಳ ಮಾರಾಟದ ದಾಖಲೆ !
ನವದೆಹಲಿ: ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಹರ್ ಘರ್ ತಿರಂಗಾ ಅಭಿಯಾನದಿಂದ ದಾಖಲೆ ಮಟ್ಟದಲ್ಲಿ ತ್ರಿವರ್ಣ ಧ್ವಜಗಳು ಮಾರಾಟವಾಗಿವೆ. ಈ ಬಾರಿ ಬರೋಬ್ಬರಿ 30 ಕೋಟಿಗೂ ಹೆಚ್ಚು ಧ್ವಜಗಳು ಮಾರಾಟ ಆಗಿವೆ. ಅಂದರೆ ಭಾರತದ ಜನಸಂಖ್ಯೆಯಲ್ಲಿ ಪ್ರತಿ ನೂರು ಮಂದಿಗೆ 21 ಮಂದಿ ಧ್ವಜ ಖರೀದಿ ಮಾಡಿದ್ದಾರೆ. ಮೋದಿಯವರ ಕರೆಗೆ ಇಡೀ ದೇಶಕ್ಕೆ ದೇಶವೇ ಸ್ಪಂದಿಸಿದೆ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.
ಈ ವರ್ಷ 30 ಕೋಟಿಗೂ ಹೆಚ್ಚು ಧ್ವಜಗಳು ಮಾರಾಟವಾಗುವುದರ ಮೂಲಕ ಒಟ್ಟು 500 ಕೋಟಿ ರೂಪಾಯಿಗಳ ವ್ಯಾಪಾರವಾಗಿದೆ ಎಂದು ವ್ಯಾಪಾರಿಗಳ ಸಂಸ್ಥೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ತಿಳಿಸಿದೆ. ಆಗಸ್ಟ್ 13 ಮತ್ತು ಆಗಸ್ಟ್ 15ರ ನಡುವೆ ಮೂರು ದಿನಗಳ ಕಾಲ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಅಥವಾ ಪ್ರದರ್ಶಿಸಲು ಜನರನ್ನು ಉತ್ತೇಜಿಸಲಾಗಿತ್ತು. ಕಳೆದ ಜುಲೈ 22 ರಂದೇ ಈ ಅಭಿಯಾನವನ್ನು ಪ್ರಾರಂಭಿಸಿಸಲಾಗಿತ್ತು.
ಹರ್ ಘರ್ ತಿರಂಗಾ ಚಳುವಳಿಯು ಕೇವಲ 20 ದಿನಗಳ ದಾಖಲೆಯ ಸಮಯದಲ್ಲಿ 30 ಕೋಟಿಗೂ ಹೆಚ್ಚು ಧ್ವಜಗಳನ್ನು ತಯಾರಿಸಿದ ಭಾರತೀಯ ಉದ್ಯಮಿಗಳ ಸಾಮರ್ಥ್ಯವನ್ನು ತೋರಿಸುತ್ತದೆ. ದೇಶದ ಜನರಲ್ಲಿ ತಿರಂಗದ ಬಗ್ಗೆ ಇರುವ ಅಭೂತಪೂರ್ವ ಬೇಡಿಕೆಯನ್ನು ಇದು ಯಶಸ್ವಿಯಾಗಿ ಪೂರೈಸಿದೆ ಎಂದು ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ.ಭರ್ತಿಯಾ ಮತ್ತು ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ 15 ದಿನಗಳಲ್ಲಿ, CAIT ಮತ್ತು ದೇಶಾದ್ಯಂತ ವಿವಿಧ ಟ್ರೇಡ್ ಅಸೋಸಿಯೇಷನ್ಗಳು 3,000 ತಿರಂಗಾ ಕಾರ್ಯಕ್ರಮಗಳನ್ನು ಆಯೋಜಿಸಿವೆ ಎಂದು CAIT ತಿಳಿಸಿದೆ.