ದೇಶಕ್ಕಿಂದು ಸ್ವಾತಂತ್ರ್ಯ ದಿನದ ಅಮೃತಮಹೋತ್ಸವದ ಸಂಭ್ರಮ | ಕೆಂಪು ಕೋಟೆಯಲ್ಲಿ ‘ತಿರಂಗ’ ಹಾರಿಸಿ ಉಡುಗೆಯಿಂದ ಗಮನಸೆಳೆದ ಮೋದಿ
ಭಾರತ ದೇಶ ಸ್ವತಂತ್ರವಾಗಿ ಇಂದಿಗೆ 75 ವರ್ಷವಾಗಿದೆ. ಹಾಗಾಗಿ ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವನ್ನು ಸಡಗರ, ಸಂಭ್ರಮದಿಂದ ಆಚರಿಸುತ್ತಿದ್ದು, ಎಲ್ಲೆಡೆ ದೇಶಭಕ್ತಿಗೀತೆಗಳು ಮೊಳಗುತ್ತಿದೆ. ಬ್ರಿಟಿಷರ ಆಳ್ವಿಕೆಯಲ್ಲಿದ್ದ ನಮ್ಮ ದೇಶ ಭಾರತವನ್ನು 1947ರ ಆಗಸ್ಟ್ 15ರ ಮಧ್ಯರಾತ್ರಿ 12 ಗಂಟೆಗೆ ಬ್ರಿಟಿಷರಿಂದ ಮುಕ್ತಿಗೊಳಿಸಿ, ಸ್ವಾತಂತ್ರ್ಯವನ್ನು ಪಡೆಯಲಾಯಿತು. ಇಂದು ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂಭ್ರಮ.
ಪ್ರತೀ ವರ್ಷದಂತೆ ಸ್ವಾತಂತ್ರ್ಯ ದಿನಾಚರಣೆಯ ದಿನವಾದ ಇಂದು ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಲಾಗುತ್ತದೆ. ವಿಭಿನ್ನತೆಗೆ ಹೆಸರು ಮಾಡಿದ ನಮ್ಮ ಪ್ರಧಾನಿ ನರೇಂದ್ರ ಮೋದಿ 75ನೇ ಸ್ವಾತಂತ್ರ್ಯ ದಿನಕ್ಕೆ ತಮ್ಮ ಉಡುಗೆಯಿಂದ ಬಹಳ ಗಮನ ಸೆಳೆದಿದ್ದಾರೆ.
ಹೌದು. ರಾಷ್ಟ್ರೀಯ ಧ್ವಜದ ಚಿತ್ರವಿರುವ ಟರ್ಬಾನ್ ತೊಟ್ಟು, ಬಿಳಿ ಜುಬ್ಬಾ- ಪೈಜಾಮದ ಮೇಲೆ ನೀಲಿ ಬಣ್ಣದ ನೆಹರೂ ಜಾಕೆಟ್ ತೊಟ್ಟು ಮೋದಿ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಭಾಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿಶಿಷ್ಟ ಉಡುಪುಗಳು ಯಾವಾಗಲೂ ರಾಷ್ಟ್ರದ ಗಮನವನ್ನು ಸೆಳೆಯುತ್ತವೆ. ಈ ವರ್ಷ ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮೋದಿ ಸಾಂಪ್ರದಾಯಿಕ ಕುರ್ತಾ ಮತ್ತು ನೀಲಿ ಜಾಕೆಟ್ ಮತ್ತು ಪೇಟವನ್ನು ಧರಿಸಿದ್ದರು.
ಐತಿಹಾಸಿಕ ಕೆಂಪು ಕೋಟೆಯ ಮೇಲೆ ಮೋದಿ ‘ತಿರಂಗ’ವನ್ನು ಹಾರಿಸಿದರು. ಇದು ಕೆಂಪು ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವ 9ನೇ ಸ್ವಾತಂತ್ರ್ಯ ದಿನದ ಭಾಷಣವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದ ʼಹರ್ ಘರ್ ತಿರಂಗಾʼ ಅಭಿಯಾನಕ್ಕೂ ಅಭೂತಪೂರ್ವ ಯಶಸ್ಸು ಸಿಕ್ಕಿದ್ದು, ಪ್ರತಿಯೊಂದು ಮನೆ ಮೇಲೂ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣದ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದು, ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದ ದೇಶವಾಸಿಗಳಿಗೆ ಶುಭಾಶಯಗಳು. ಸ್ವಾತಂತ್ರ್ಯದ ಈ ಅಮೃತ ಮಹೋತ್ಸವಕ್ಕಾಗಿ ನಾನು ವಿಶ್ವದಾದ್ಯಂತ ಹರಡಿರುವ ಭಾರತದ ಪ್ರೇಮಿಗಳನ್ನು, ಭಾರತೀಯರನ್ನು ಅಭಿನಂದಿಸುತ್ತೇನೆ. ‘ಆಜಾದಿ ಮಹೋತ್ಸವ’ದ ಸಮಯದಲ್ಲಿ, ನಾವು ನಮ್ಮ ಅನೇಕ ರಾಷ್ಟ್ರೀಯ ನಾಯಕರನ್ನು ನೆನಪಿಸಿಕೊಂಡೆವು. ವಿಭಜನೆಯ ಭೀಕರತೆಯನ್ನು ನಾವು ನೆನಪಿಸಿಕೊಳ್ಳಬೇಕು. ಕಳೆದ 75 ವರ್ಷಗಳಲ್ಲಿ ನಮ್ಮ ದೇಶವನ್ನು ಮುನ್ನಡೆಸಲು ಕೊಡುಗೆ ನೀಡಿದ ದೇಶದ ಎಲ್ಲಾ ನಾಗರಿಕರನ್ನು ಸ್ಮರಿಸುವ ದಿನ ಇಂದು ಎಂದು ಹೇಳಿದ್ದಾರೆ.
ಮುಂಬರುವ ವರ್ಷಗಳಲ್ಲಿ, ನಾವು ‘ಪಂಚಪ್ರಾಣ’ದ ಮೇಲೆ ಗಮನ ಹರಿಸಬೇಕು- ಮೊದಲನೆಯದಾಗಿ, ಅಭಿವೃದ್ಧಿ ಹೊಂದಿದ ಭಾರತದ ದೊಡ್ಡ ಸಂಕಲ್ಪಗಳು ಮತ್ತು ಸಂಕಲ್ಪದೊಂದಿಗೆ ಮುಂದುವರಿಯುವುದು; ಎರಡನೆಯದಾಗಿ, ದಾಸ್ಯದ ಎಲ್ಲಾ ಕುರುಹುಗಳನ್ನು ಅಳಿಸಿಹಾಕಿ; ಮೂರನೆಯದಾಗಿ, ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಪಡಿರಿ; ನಾಲ್ಕನೆಯದು, ಏಕತೆಯ ಬಲ ಮತ್ತು ಐದನೆಯದು, ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳನ್ನು ಒಳಗೊಂಡ ನಾಗರಿಕರ ಕರ್ತವ್ಯಗಳು ಎಂದು ಹೇಳಿದ್ದಾರೆ.