ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಮುಕ್ತವಾದ ದಿನ
ನಮ್ಮ ಹೆಮ್ಮೆಯ ಸ್ವಾತಂತ್ರ್ಯೋತ್ಸವ ಮತ್ತೆ ಬಂದಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಎಲ್ಲಾ ಸ್ವಾತಂತ್ರ್ಯ ಸೇನಾನಿಗಳನ್ನು ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆಗಸ್ಟ್ 15 ಭಾರತದ ಪಾಲಿಗೆ ಸ್ವರ್ಣಾಕ್ಷರದಲ್ಲಿ ಬರೆದಿಡಬೇಕಾದಂತ ದಿನ. ಕಲೆ ,ಸಾಹಿತ್ಯ ,ಸಂಸ್ಕೃತಿ ಪರಂಪರೆಯಿಂದ ಶ್ರೀಮಂತ ವಾಗಿದ್ದ ನಮ್ಮ ದೇಶ ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಮುಕ್ತವಾಗಿ ಹೊಸ ರೂಪ ಪಡೆದ ಸುದಿನ ಇದಾಗಿದೆ. ಇಂದು ನಾವೆಲ್ಲರೂ ಸ್ವಾತಂತ್ರ್ಯದ ಸವಿ ಉಣ್ಣುತ್ತಿದ್ದೇವೆ ನಿಜ, ಆದರೆ ಇದು ಅತ್ಯಂತ ಸುಲಭವಾಗಿ ಸಿಕ್ಕಿರುವಂತ ಸ್ವಾತಂತ್ರ್ಯವಂತು ಖಂಡಿತ ಅಲ್ಲ. ಅದೆಷ್ಟೋ ದೇಶಭಕ್ತರು ತಮ್ಮ ರಕ್ತವನ್ನು ,ಬೆವರನ್ನು ಬಸಿದು ತಂದುಕೊಟ್ಟ ಸ್ವಾತಂತ್ರ್ಯವಿದು. ತಮ್ಮ ಈ ಹೋರಾಟದ ಹಾದಿಯಲ್ಲಿ ಅದೆಷ್ಟೋ ಕೆಚ್ಚೆದೆಯ ಹೋರಾಟಗಾರರು ಪ್ರಾಣ-ಹಾನಿ ಎಂಬ ಆತಂಕವಿಲ್ಲದೆ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಅನುದಿನ ಅನು ಕ್ಷಣವು ದೇಶದ ಬಗ್ಗೆ ಚಿಂತಿಸುತ್ತಿದ್ದ ಈ ಸಮರ ಸೇನಾನಿಗಳ ತ್ಯಾಗದ ಸಂಕೇತದ ಫಲವೇ ಈ ಸ್ವಾತಂತ್ರ್ಯ.
ನಮ್ಮಲ್ಲಿ ಸ್ವಾತಂತ್ರ್ಯದ ಒಂದೊಂದು ತುಣುಕು ಕಥೆಗಳನ್ನು ಕೇಳಿದಾಗ ,ಒಂದೊಂದು ಕ್ಷಣವನ್ನು ನೆನಪಿಸಿಕೊಳ್ಳುವಾಗಲೂ ಕೂಡ ದೇಶಪ್ರೇಮದ ಕಿಚ್ಚು ಅಧಿಕವಾಗುತ್ತಲೇ ಸಾಗಬೇಕಾಗಿದೆ. ಹಾಗಾಗಿ ನಮ್ಮ ದೇಶಕ್ಕೆ ಜೀವತೆತ್ತ ವೀರಯೋಧರ ಹಾಗೂ ಮಹಾನ್ ಸ್ವಾತಂತ್ರ್ಯ ಹೋರಾಟಗಾರು ಮಾಡಿದ ತ್ಯಾಗ ಬಲಿದಾನಗಳು ವ್ಯರ್ಥವಾಗದಂತೆ ನೋಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ದೇಶವನ್ನು ಕಟ್ಟಲು ಶ್ರಮಿಸಿದ ,ಪ್ರತಿಯೊಬ್ಬರೂ ಹಾಕಿಕೊಟ್ಟ ದೇಶಪ್ರೇಮದ ಪ್ರಾಮಾಣಿಕತೆಯ ನಿಲುವಿನ ಹಾದಿಯಲ್ಲಿ ಕೂಡ ಮುನ್ನಡೆಯುವುದು ಬಲು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ಪುಟ್ಟ ಹೆಜ್ಜೆ ಇಡೋಣ. ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ದಿನಗಳಂದು ಮಾತ್ರವಲ್ಲದೆ ಪ್ರತಿದಿನ ನಾವುಗಳು ದೇಶಭಕ್ತರಾಗೋಣ.
ಸ್ನೇಹಿತರೇ, ದೇಶದ ಸೇವೆಗಾಗಿ ಸದಾ ನಮ್ಮ ಜೀವನವನ್ನು ಮುಡಿಪಾಗಿಡೋಣ. ನಿಮಗೆಲ್ಲರಿಗೂ ಸ್ವಾತಂತ್ರ ದಿವಸದ ಶುಭಾಶಯಗಳು.
ಜೈ ಹಿಂದ್ ವಂದೇ ಮಾತರಂ
✍️ಕಿಶನ್.ಎಂ.
‘ಪವಿತ್ರ ನಿಲಯ’ ಪೆರುವಾಜೆ