ಮಗನ ಟ್ರೋಫಿಗೆ ಆಸರೆ ಆದ ಅಮ್ಮನ ಅರ್ಧ ಹರಿದ ಸೀರೆ | ಮೂಟೆ ಹೊತ್ತ ಕೈ “ಕಾಮನ್ ವೆಲ್ತ್ ಟ್ರೋಫಿ” ಎತ್ತಿದ ಕಥೆ

ಕೋಲ್ಕತಾ: ಸಾಧನೆ ಎಂಬುದು ಕೇವಲ ಮಾತಿನಿಂದ ಯಶಸ್ಸು ಕಾಣಲು ಸಾಧ್ಯವಿಲ್ಲ. ಅದಕ್ಕೆ ತಕ್ಕಂತೆ ಪರಿಶ್ರಮ ಅಗತ್ಯ. ಯಾವ ವ್ಯಕ್ತಿ ಬಾಲ್ಯದಿಂದಲೂ ಕಷ್ಟ ಎಂಬ ಪದಕ್ಕೆ ಬೆವರು ಹರಿಸಿದ್ದಾನೋ ಆತ ನಿಜವಾಗಿಯೂ ಒಂದು ದಿನ ಹೀರೋ ಆಗಬಲ್ಲ. ಭಾರತದ ಅದೆಷ್ಟೋ ಕ್ರೀಡಾಪಟುಗಳು ಬಡತನದ ಬೆಂಕಿಯಲ್ಲಿ ಬೆಂದು ಬಂದವರೇ. ಹೀಗಾಗಿಯೇ ಇವರು ಇಂದು ಸಾಧನೆ ಎಂಬ ಮಹತ್ತರವಾದ ಪಟ್ಟ ಏರಲು ಸಾಧ್ಯವಾಗಿದೆ.

 

ಹೌದು. ಇದಕ್ಕೆ ಉದಾಹರಣೆಯಾಗಿ ನಿಂತಿದ್ದಾನೆ ಭಾರತದ ಹೆಮ್ಮೆಯ ಆಟಗಾರ ಅಚಿಂತ ಶೆಯುಲಿ. ಮೊನ್ನೆಯ ಕಾಮನ್ವೆಲ್ತ್‌ ಗೇಮ್ಸ್‌ನ 73 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದ ಕ್ರೀಡಾಪಟು. ಈತನ ಈ ಯಶಸ್ಸಿಗೆ ಕಾರಣವೇ ಮೂಟೆ ಹೊತ್ತಿದ್ದ ಕೈಗಳು. ಹೌದು. ಅಂದು ಮೂಟೆ ಎತ್ತಲು ಸಹಕರಿಸಿದ ತೋಳು ಇಂದು ಟ್ರೋಫಿ ಎತ್ತಲು ಕೈಜೋಡಿಸಿದೆ.ಇಂತಹ ಉತ್ತಮ ಸಾಹಸಿ, ಬಡತನ ಎಂಬ ಶತ್ರುವನ್ನು ಜಯಿಸಿ ಬಂದ ಈತನ ಕಥೆ ಕೇಳಲೇ ಬೇಕು.

ಪಶ್ಚಿಮ ಬಂಗಾಲದ ಹೌರಾ ಜಿಲ್ಲೆಯ ದೇವಲ್ಪುರ್‌ ಎಂಬ ಕುಗ್ರಾಮದಲ್ಲಿ ಇವರ ಮನೆ. ಇದೊಂತರ ಎರಡೇ ಕೋಣೆಗಳಿರುವ ಪುಟ್ಟ ಪ್ರಪಂಚ. ಇಲ್ಲಿ ಆಸ್ತಿ ಐಶ್ವರ್ಯವಿಲ್ಲ. ಛಲ ಎಂಬ ಶ್ರೀಮಂತಿಕೆಯೊಂದೇ ಕಾಣಸಿಗುತ್ತದೆ. ಇವರ ಮನೆಯಲ್ಲಿ ಕಪಾಟು ಇಲ್ಲವೇ ಇಲ್ಲ. ಹೀಗಾಗಿ ಮಗ ಗೆದ್ದ ಟ್ರೋಫಿಗಳಿಗೆ ಆತನ ಅಮ್ಮ ಪೂರ್ಣಿಮಾ ಶೆಯುಲಿ ಅವರ ಹರಿದ ಸೀರೆಯೇ ಆಸರೆ. ಹೌದು. ತನ್ನ ಮಗನ ಟ್ರೋಫಿಯನ್ನು ತಮ್ಮ ಅರ್ಧ ಹರಿದ ಸೀರೆಗಳಲ್ಲಿ ಸುತ್ತಿಟ್ಟಿದ್ದಾರೆ.

ಸಾಧನೆ ಮಾಡಿದ ಮಗನ ಕುರಿತು ಹೆಮ್ಮೆಯಿಂದ ಮಾತಾಡಿದ ಅಮ್ಮ “ಅಚಿಂತ ಬಂದ ಬಳಿಕ ಮಾಧ್ಯಮದವರು, ಛಾಯಾ ಚಿತ್ರಗ್ರಾಹಕರೆಲ್ಲ ನಮ್ಮ ಮನೆಗೆ ಆಗಮಿಸಲಿದ್ದಾರೆ ಎಂಬುದು ನನಗೆ ಗೊತ್ತು. ಅವನು ಗೆದ್ದ ಪದಕ, ಟ್ರೋಫಿಗಳನ್ನೆಲ್ಲ ಸ್ಟೂಲ್‌ ಒಂದರ ಮೇಲೆ ರಾಶಿ ಹಾಕಿಟ್ಟಿದ್ದೇನೆ. ಇದನ್ನು ಇಷ್ಟು ಕಾಲ ಹರಿದ ಸೀರೆಗಳಲ್ಲಿ ಜೋಪಾನವಾಗಿರಿಸಿದ್ದೆ’ ಎಂದು ಪೂರ್ಣಿಮಾ ಶೆಯುಲಿ ಖುಷಿಯಲ್ಲೇ ನುಡಿದಿದ್ದಾರೆ. ಆಗ ಅವರ ಕಣ್ಣಂಚಿನಲ್ಲಿ ಬಡತನದ ರೇಖೆ ಗೋಚರಿಸುತ್ತಲೇ ಇರಲಿಲ್ಲ. ಯಾಕಂದ್ರೆ ಬಡತನಕ್ಕಿಂತಲೂ ಮಗನ ಸಾಧನೆ ಆಕೆಯ ಕಣ್ಣೆದುರಿಗೆ ಸಂಭ್ರಮಿಸುತ್ತಿತ್ತು.

2013ರಲ್ಲಿ ಅಚಿಂತ ಅವರ ತಂದೆ ನಿಧನರಾಗಿದ್ದು, ಅಂದಿನಿಂದ ಮಕ್ಕಳಾದ ಆಲೋಕ್‌ ಮತ್ತು ಅಚಿಂತ ಅವರನ್ನು ಬೆಳೆಸುವ ಸಂಪೂರ್ಣ ಹೊಣೆಯನ್ನು ಪೂರ್ಣಿಮಾ ಅವರೇ ಹೊತ್ತಿದ್ದರು. “ಇಂದು ನನಗೆ ದೇವರಲ್ಲಿ ನಂಬಿಕೆ ಮೂಡಿತು. ಅದೆಷ್ಟು ಕಷ್ಟಪಟ್ಟು ಇಬ್ಬರು ಮಕ್ಕಳನ್ನು ಬೆಳೆಸಿದೆ ಎಂಬುದು ನನಗಷ್ಟೇ ಗೊತ್ತು. ಕೆಲವು ದಿನ ಊಟಕ್ಕೂ ಕಷ್ಟವಾಗುತ್ತಿತ್ತು. ಮಕ್ಕಳು ಹಸಿವಿನಿಂದ ನಿದ್ದೆ ಹೋದ ದಿನಗಳೂ ಇದ್ದವು. ಇದನ್ನೆಲ್ಲ ಹೇಗೆ ಹೇಳಬೇಕೆಂಬುದೇ ನನಗೆ ತಿಳಿಯುತ್ತಿಲ್ಲ’ ಎಂದು ಪೂರ್ಣಿಮಾ ಹೇಳಿದರು.

ಅಚಿಂತ ಮತ್ತು ಅವರ ಹಿರಿಯ ಸಹೋದರ ಆಲೋಕ್‌ ಸ್ಥಳೀಯ ಉತ್ಪಾದನಾ ಘಟಕದಲ್ಲಿ ಸೀರೆಗಳ ಮೇಲೆ ಜರಿ ಕೆಲಸ ಮಾಡುವುದರ ಜತೆಗೆ ಸರಕುಗಳನ್ನು ಲೋಡ್‌ ಮತ್ತು ಅನ್‌ಲೋಡ್‌ ಮಾಡಬೇಕಾಗಿತ್ತು ಎಂದು ತಾಯಿ ನೆನಪಿಸಿಕೊಂಡರು. ನನ್ನ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವುದನ್ನು ಬಿಟ್ಟು ನನಗೆ ಬೇರೆ ದಾರಿ ಇರಲಿಲ್ಲ. ಇಲ್ಲದಿದ್ದರೆ ನಾವು ಬದುಕುವುದು ಕಷ್ಟಕರವಾಗಿತ್ತು” ಎಂದು ಹೇಳಿದರು.

“ಒಳ್ಳೆಯ ಕೆಲಸ ಮಾಡಿದ ಅನಂತರ ಮನೆಗೆ ಹಿಂದಿರುಗುತ್ತಿರುವುದು ತುಂಬಾ ಸಂತೋಷವಾಗಿದೆ. ನನ್ನ ತಾಯಿ ಮತ್ತು ತರಬೇತುದಾರ ಅಸ್ತಮ್‌ ದಾಸ್‌ ಅವರಿಂದ ಈ ಸಾಧನೆ ಮಾಡುವಂತಾಗಿದೆ. ಅವರಿಬ್ಬರೂ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಅವರಿಂದಾಗಿಯೇ ನಾನು ಇಷ್ಟು ಎತ್ತರಕ್ಕೆ ಏರಲು ಸಾಧ್ಯವಾಗಿದೆ’ ಎಂದು ಅಚಿಂತ ಬಾಲ್ಯದ ಬಡತನ ನೆನೆದು ಹೇಳಿದರು.

Leave A Reply

Your email address will not be published.