ಭಾರತದಲ್ಲೂ ಬರಲಿದೆ ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ ; ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ, ಮೊದಲಾದ ಗ್ಯಾಜೆಟ್‌ಗಳಿಗೆ ಒಂದೇ ರೀತಿಯ ಚಾರ್ಜರ್
ಇಷ್ಟು ದಿನ ನಾವು ಬಳಸುತ್ತಿದ್ದ ಮೊಬೈಲ್, ಲ್ಯಾಪ್ ಟಾಪ್ ಹೀಗೆ ಅನೇಕ ಎಲೆಕ್ಟ್ರಾನಿಕ್ ವಸ್ತುಗಳಿಗೆ ಬೇರೆ ಬೇರೆ ರೀತಿಯ ಚಾರ್ಜರ್ ಗಳು ಇರುತ್ತಿದ್ದವು. ಅದಕ್ಕೆ ಸರಿ ಹೊಂದುವಂತಹ ಬೇರೆ ಬೇರೆ ಚಾರ್ಜಿಂಗ್ ಕೇಬಲ್‌ಗಳನ್ನು ಯಾವಾಗಲೂ ಇಟ್ಟುಕೊಳ್ಳುವ ಅಗತ್ಯವೂ ಇತ್ತು. ಆದರೆ ಇನ್ನು ಮುಂದೆ ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ ಹೀಗೆ ಮೊದಲಾದ ಗ್ಯಾಜೆಟ್‌ಗಳಲ್ಲೂ ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ ಇರಲಿದೆ. ಬೇರೆ ಬೇರೆ ರೀತಿಯ ಚಾರ್ಜಿಂಗ್ ಕೇಬಲ್‌ಗಳ ರಾಶಿ ಇಟ್ಟುಕೊಳ್ಳುವ ಅಗತ್ಯ ಬೀಳುವುದಿಲ್ಲ.
ಹೌದು. ಸ್ಮಾರ್ಟ್ ಫೋನ್ ಗಳು ಮತ್ತು ಟ್ಯಾಬ್ಲೆಟ್ ಗಳು ಸೇರಿದಂತೆ ವಿವಿಧ ಸಾಧನಗಳಿಗೆ ಒಂದೇ ರೀತಿಯ ಚಾರ್ಜರ್ ಅಳವಡಿಕೆ ಕಡ್ಡಾಯ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಚರ್ಚಿಸಲು ಆಗಸ್ಟ್ 17 ರಂದು ಮಹತ್ವದ ಸಭೆ ಕರೆಯಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಭಾರತದಲ್ಲಿ ಬಹು ಚಾರ್ಜರ್ ಗಳ ಬಳಕೆಯನ್ನು ಕೊನೆಗೊಳಿಸುವ ಸಾಧ್ಯತೆಯನ್ನು ನಿರ್ಣಯಿಸಲು ಮತ್ತು ಇ-ತ್ಯಾಜ್ಯವನ್ನು ತಡೆಗಟ್ಟುವುದರ ಜೊತೆಗೆ ಗ್ರಾಹಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಮೊಬೈಲ್ ತಯಾರಕರು ಮತ್ತು ವಲಯ-ನಿರ್ದಿಷ್ಟ ಸಂಸ್ಥೆಗಳೊಂದಿಗಿನ ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಒಂದೊಂದು ಸಾಧನಗಳಿಗೆ ಒಂದೊಂದು ಚಾರ್ಜಿಂಗ್ ಕೇಬಲ್‌ಗಳು ಇರುವುದರಿಂದ ಹಾಳಾದ ಬಳಿಕ ಹೆಚ್ಚು ಹೆಚ್ಚು ಎಲೆಕ್ಟ್ರಾನಿಕ್ ತ್ಯಾಜವಾಗಿ(ಇ-ತ್ಯಾಜ್ಯ) ಪರಿಸರಕ್ಕೆ ಭಾರೀ ಹಾನಿ ಉಂಟುಮಾಡುತ್ತದೆ. ಎಲ್ಲಾ ಸಾಧನಗಳಿಗೂ ಒಂದೇ ರೀತಿಯ ಕೇಬಲ್ ಅನ್ನು ಬಳಕೆ ಮಾಡಲು ಪ್ರಾರಂಭಿಸಿದ್ದಲ್ಲಿ, ಇ-ತ್ಯಾಜ್ಯವನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಿದೆ. ಹೀಗಾಗಿ ಸರ್ಕಾರ ಪರಿಸರ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿದೆ.
ಪ್ರಸ್ತುತ, ವಿವಿಧ ಉಪಕರಣಗಳಿಗೆ ವಿವಿಧ ಚಾರ್ಜರ್ ಗಳಿವೆ. ಗ್ರಾಹಕರು ಪ್ರತಿ ಬಾರಿ ಹೊಸ ಸಾಧನವನ್ನು ಖರೀದಿಸಿದಾಗ ಪ್ರತ್ಯೇಕ ಚಾರ್ಜರ್ ಖರೀದಿಸಬೇಕಿದೆ. ಇದರ ಬದಲು. ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಒಂದೇ ಚಾರ್ಜರ್ ಇರುವಂತೆ ಮಾಡಲಾಗುವುದು ಎನ್ನಲಾಗಿದೆ.
ಇತ್ತೀಚೆಗೆ, ಯುರೋಪಿಯನ್ ಯೂನಿಯನ್ 2024 ರ ವೇಳೆಗೆ ಸಣ್ಣ ಎಲೆಕ್ಟ್ರಾನಿಕ್ ಸಾಧನಗಳಿಗೆ USB-C ಪೋರ್ಟ್ ಸಾಮಾನ್ಯ ಚಾರ್ಜಿಂಗ್ ಮಾನದಂಡವನ್ನು ಅಳವಡಿಸಿಕೊಳ್ಳುವುದಾಗಿ ಘೋಷಿಸಿತು. US ನಲ್ಲಿಯೂ ಇದೇ ರೀತಿಯ ಬೇಡಿಕೆಯಿದೆ. ಎಲ್ಲಾ ರೀತಿಯ ಗ್ಯಾಜೆಟ್‌ಗಳಿಗೂ ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ ಅನ್ನು ಕಡ್ಡಾಯಗೊಳಿಸಲು ಯುರೋಪಿಯನ್ ಯೂನಿಯನ್(ಇಯು) ಸದಸ್ಯ ರಾಷ್ಟ್ರಗಳು ಒಪ್ಪಿಕೊಂಡಿವೆ. ಇದರ ಪರಿಣಾಮವಾಗಿ ಇನ್ನು ಮುಂದೆ ತಯಾರಾಗಲಿರುವ ಎಲ್ಲಾ ರೀತಿಯ ಗ್ಯಾಜೆಟ್‌ಗಳಲ್ಲೂ ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಇರಲಿದೆ.