ಭಾರತ-ಪಾಕ್ ಕ್ರಿಕೆಟ್ ಪಂದ್ಯ ರದ್ದು ಗೊಳಿಸಿ: ಯುಟಿ ಖಾದರ್

ಮಂಗಳೂರಿನ ಸರ್ಕ್ಯೂಟ್‌ ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಯು. ಟಿ. ಖಾದರ್, “ರಾಷ್ಟ್ರಧ್ವಜ ಎಂಬುದು ಕೇವಲ ಬಟ್ಟೆ ಅಲ್ಲ, ಭಾರತದ ಸ್ವಾತಂತ್ರ್ಯದ ತಾಯಿ ಬೇರು ಖಾದಿ. ಪಾಲಿಸ್ಟರ್ ಬಟ್ಟೆಗಳನ್ನು ವಿದೇಶದಿಂದ ತಂದಾಗ ಗಾಂಧೀಜಿ ಖಾದಿ ಚಳುವಳಿಯನ್ನೇ ಮಾಡಿದ್ದರು. ಖಾದಿ ನೇಯುವ ಚರಕನೇ ಆಗಿರಬಹುದು. ಆದರೆ ಅದು ಕೇವಲ ವಸ್ತು ಅಲ್ಲ, ಭಾರತೀಯರು ಬ್ರಿಟಿಷರಿಂದ ಬಂಧ ಮುಕ್ತವಾದ ಸಂಕೇತ. ರಾಷ್ಟ್ರಧ್ವಜಕ್ಕೆ ತಿದ್ದುಪಡಿ ತಂದು ಖಾದಿ ಬದಲು ಪಾಲಿಸ್ಟರ್ ಬಟ್ಟೆ ಉಪಯೋಗ ಮಾಡಬಹುದೆಂಬ ಕೇಂದ್ರ ಸರ್ಕಾರದ ತೀರ್ಮಾನವು ಸ್ವಾತಂತ್ರ್ಯ ಚಳುವಳಿಗೆ ಮಾಡಿದ ಅವಮಾನ” ಎಂದರು.

 

“ವಿಶ್ವದಲ್ಲೇ ಖಾದಿಗೆ ಗೌರವವಿದೆ‌ ಯಾವುದೇ ಸರಕಾರ ಬಂದರೂ ಖಾದಿಗೆ ವಿಶೇಷ ಪ್ರೋತ್ಸಾಹ ಗೌರವ ನೀಡಿದೆ. ಖಾದಿಯ ಮಹತ್ವ ವಿಶ್ವದಲ್ಲೇ ತಿಳಿದಿದ್ದರೂ ಅಮೃತ ಮಹೋತ್ಸವದ ಸಂದರ್ಭದಲ್ಲಿ ಖಾದಿಗೆ ಹೆಚ್ಚಿನ ಮಹತ್ವ ನೀಡಬೇಕಿತ್ತು. ಆದರೆ ಕೇಂದ್ರ ಸರಕಾರ ಅವಮಾನ ಮಾಡಿದೆ. ಪಾಲಿಸ್ಟರ್ ಬಟ್ಟೆಯನ್ನು ವಿದೇಶದಿಂದ ಆಮದು ಮಾಡುವುದರಿಂದ ಚೀನಾಗೆ ಲಾಭವಾಗುತ್ತದೆ. ಒಂದೆಡೆ ಚೀನಾದವರಿಂದ ತೊಂದರೆ ಅಂತಾ ಹೇಳಿ ಅವರ ಆಯಪ್‌ಗಳನ್ನು ಬಂದ್‌ ಮಾಡುತ್ತಾರೆ. ಇನ್ನೊಂದೆಡೆ ಅವರಿಗೆ ವ್ಯವಹಾರಿಕ ಲಾಭ ಮಾಡುತ್ತಾರೆ” ಎಂದು ಯು. ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಪಾಕಿಸ್ಥಾನದ ಜೊತೆ ಕ್ರಿಕೆಟ್ ಆಟ ಆಡುವುದಿಲ್ಲ ಎಂದು ಹೇಳಿ ದೇಶದಲ್ಲಿರುವ ಅನೇಕ ಕ್ರಿಕೆಟ್ ಸ್ಟೇಡಿಯಂಗಳ ಪಿಚ್ ಹಾಳು ಮಾಡಿದ್ದಾರೆ. ಈಗ ಬಿಸಿಸಿಐ ಮುಖ್ಯಸ್ಥರು ದುಬೈನಲ್ಲಿ ಭಾರತ-ಪಾಕ್ ಕ್ರಿಕೆಟ್ ಆಯೋಜನೆ ಮಾಡಿದ್ದಾರೆ. ಯಾಕೆ ದುಬೈನಲ್ಲೂ ಆಟ ಆಡುತ್ತಿದ್ದಾರೆ‌. ದೇಶದ ಮೇಲೆ ಅಷ್ಟು ಪ್ರೀತಿ ಇದ್ದರೆ ಈ ಪಂದ್ಯವನ್ನು ವಿರೋಧಿಸಿ. ಜನರನ್ನು ಮೂರ್ಖರನ್ನಾಗಿ ಮಾಡೋದು ಸರಿಯಲ್ಲ. ಮ್ಯಾಚ್ ಆಡೋದನ್ನು ನಿಲ್ಲಿಸಿ. ಪಾಕ್‌ಗೆ ಬಸ್, ಟ್ರೈನ್ ನ್ನು ಯುಪಿಎ ಸರಕಾರ ನಿಲ್ಲಿಸಿದ್ದವು. ಆದರೆ ಈಗ ಪಾಕ್‌ನಲ್ಲಿ ಚಹಾ ಕುಡಿದು ಬರ್ತಾರೆ. ಕೇಂದ್ರ ಸರಕಾರಕ್ಕೆ ನಿಜವಾದ ದೇಶ ಪ್ರೇಮ ಇದ್ದರೆ ದುಬೈನಲ್ಲಿ ಆಟ ಕ್ಯಾನ್ಸಲ್ ಮಾಡಬೇಕು” ಎಂದು ಖಾದರ್ ಸವಾಲು ಹಾಕಿದ್ದಾರೆ.

Leave A Reply

Your email address will not be published.