ಭಾರೀ ಮಳೆ : ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಮತ್ತೆ ಆಪತ್ತು? ಗುಡ್ಡ ಕುಸಿತ ಸಾಧ್ಯತೆ
ಎತ್ತ ನೋಡಿದರತ್ತ ಮಳೆಯ ಅಬ್ಬರ. ಮಳೆಯ ತೀವ್ರತೆ ಎಷ್ಟಿದೆಯೆಂದರೆ ಅಕ್ಷರಶಃ ಜನ ನಲುಗಿ ಹೋಗಿದ್ದಾರೆ ಎಂದೇ ಹೇಳಬಹುದು. ಇತ್ತ ಕೊಡಗಿನಲ್ಲಿ ಕೂಡಾ ಮಳೆ ಜೋರಾಗಿಯೇ ಇದೆ. ಅಷ್ಟು ಮಾತ್ರವಲ್ಲದೇ, ಅಲ್ಲಲ್ಲಿ ಗುಡ್ಡ ಕುಸಿಯುವ ಭೀತಿ ಕೂಡಾ ವ್ಯಕ್ತವಾಗಿದೆ. ಇದೀಗ ಮಡಿಕೇರಿ ಸಮೀಪದ ಮದೆನಾಡಿನ ಕರ್ತೋಜಿ ಎಂಬಲ್ಲಿ ಗುಡ್ಡವೊಂದು ರಾಷ್ಟ್ರೀಯ ಹೆದ್ದಾರಿ 275 ಕ್ಕೆ ಕುಸಿಯುವ ಪರಿಸ್ಥಿತಿಯಲ್ಲಿದೆ. ಮಳೆ ಸತತವಾಗಿ ಇದೇ ರೀತಿ ಸುರಿದರೆ ರಾಷ್ಟ್ರೀಯ ಹೆದ್ದಾರಿ 275 ರ ಮೇಲೆ ಈ ಗುಡ್ಡ ಕುಸಿದು ಸಂಪೂರ್ಣ ಬಂದ್ ಆಗುವ ಸಾಧ್ಯತೆ ಬಹಳಷ್ಟಿದೆ.
2019 ರಲ್ಲೂ ಇದೇ ಭಾಗದಲ್ಲಿ ಗುಡ್ಡ ಕುಸಿತಗೊಂಡಿತ್ತು. ಇದೀಗ ರಸ್ತೆ ಬದಿಯ ಗುಡ್ಡದಲ್ಲಿನ ಬಿರುಕು ಜನತೆಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ರಸ್ತೆಗೆ ಗುಡ್ಡ ಕುಸಿದಲ್ಲಿ ಮಡಿಕೇರಿ -ಮಂಗಳೂರು ಸಂಪರ್ಕ ಬಂದ್ ಸಾಧ್ಯತೆ ದಟ್ಟವಾಗಿದೆ. ಜೋರು ಮಳೆಯ ಸಂದರ್ಭದಲ್ಲಿ ಮಡಿಕೇರಿಗೆ ಪ್ರಯಾಣಿಸುವವರು ಅಥವಾ ಮಡಿಕೇರಿಯಿಂದ ಮಂಗಳೂರು ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಕತ್ತಲಿನ ಸಮಯದಲ್ಲಿ ಹೆಚ್ಚು ಜಾಗರೂಕರಾಗಿ ಇರಬೇಕಿದೆ. ಅಥವಾ ನೈಟ್ ಜರ್ನಿಯನ್ನು ಮಾಡದೇ ಇರುವುದು ಒಳ್ಳೆಯದು ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.