ಪಿ. ಎಂ ಮೋದಿಯಂತೆ ಯಾಕೆ ನಮ್ಮ ಅಧ್ಯಕ್ಷ ಮತ್ತು ಪ್ರಧಾನಿಗಳಿಲ್ಲ ಎಂದು ಅಸಮಾಧಾನ ತೋಡಿಕೊಂಡ ಪಾಕ್ ಪತ್ರಕರ್ತ

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಭಾರತದ ಪೂಜಾ ಗೆಲ್ಲೋಟ್ ಕಂಚಿನ ಪದಕ ಗೆದ್ದಿದ್ದಾರೆ. ಇದರಿಂದ ಅಸಮಾಧಾನಗೊಂಡ ಪೂಜಾ ಚಿನ್ನ ಗೆಲ್ಲದ್ದಕ್ಕೆ ಕ್ಷಮಿಸಿ ಎಂದು ಹೇಳಿದ್ದಾರೆ. ಆದರೆ, ಪ್ರಧಾನಿ ಮೋದಿ ಆಕೆಯನ್ನು ಹುರಿದುಂಬಿಸಿದ್ದಾರೆ.

 

ಇದೀಗ ಭಾರತದ ಪ್ರಧಾನಿಯ ಟ್ವೀಟ್ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ವಿಶೇಷ ಎಂದರೆ ಪ್ರಧಾನಿ ಮೋದಿ ಅವರ ಈ ಸ್ಫೂರ್ತಿದಾಯಕ ಮಾತುಗಳು ಅತ್ತ ಪಾಕಿಸ್ತಾನದ ಕ್ರೀಡಾ ಪ್ರೇಮಿಗಳ ಕಣ್ಮರೆಸಿದೆ. ಹೌದು. ಭಾರತದ ಪ್ರಧಾನಿ ಮಂತ್ರಿಯ ಟ್ವಿಟ್ ಅನ್ನು ರೀಟ್ವಿಟ್ ಮಾಡಿರುವ ಪಾಕಿಸ್ತಾನದ ಪತ್ರಕರ್ತ ಶೀರಾಝ್ ಹಸನ್, “ನಮ್ಮ ಪ್ರಧಾನಿ ಯಾವತ್ತಾದರೂ ಇಂತಹ ಸಂದೇಶಗಳನ್ನು ನೀಡಿದ್ದಾರೆಯೇ?” ಎಂದು ಬಹಿರಂಗ ಪ್ರಶ್ನೆಗಳನ್ನೆತ್ತಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರು ಶ್ರೀರಾಝ್ ಹಸನ್, ಭಾರತವು ತಮ್ಮ ಅಫೀಟ್‌ಗಳನ್ನು ಈ ರೀತಿ ಪ್ರೊಜೆಕ್ಟ್ ಮಾಡುತ್ತದೆ ನೋಡಿ. ಪೂಜಾ ಕಂಚು ಗೆದ್ದು, ಚಿನ್ನದ ಪದಕ ಗೆಲ್ಲಲು ಸಾಧ್ಯವಾಗದೆ ದುಃಖ ವ್ಯಕ್ತಪಡಿಸಿದ್ದರು. ಇದನ್ನು ನೋಡಿ ಪ್ರಧಾನಿ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಅಥವಾ ಅಧ್ಯಕ್ಷರಿಂದ ಇಂತಹ ಸಂದೇಶವನ್ನು ನೀವು ಎಂದಾದರೂ ನೋಡಿದ್ದೀರಾ? ಪಾಕಿಸ್ತಾನದ ಅಫೀಟ್‌ಗಳು ಕೂಡ ಪದಕಗಳನ್ನು ಗೆಲ್ಲುತ್ತಿದ್ದಾರೆ ಎಂದು ಅವರಿಗೆ ತಿಳಿದಿದೆಯೇ? ಎಂದು ಆಕ್ರೋಶ ಹೊರಹಾಕಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದರೂ, ಚಿನ್ನದ ಪದಕ ಕೈತಪ್ಪಿರುವ ನೋವಿಗೆ ಸ್ಪಂದಿಸಿರುವ ಪ್ರಧಾನಿ ಮೋದಿ ಅವರ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಪ್ರಧಾನಿ ಪೂಜಾ ಅವರ ವಿಡಿಯೋವನ್ನು ರಿಟ್ವಿಟ್ ಮಾಡುವ ಮೂಲಕ ಅವರ ಸಾಧನೆಯನ್ನು ಮತ್ತಷ್ಟು ಮಂದಿಯ ಮುಂದೆ ತೆರೆದಿಟ್ಟಿದ್ದಾರೆ. ಇದೀಗ ಪೂಜಾ ಗೆದ್ದೋಟ್ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ. ಅತ್ತ ಪಾಕಿಸ್ತಾನದ ಪತ್ರಕರ್ತ ಶ್ರೀರಾಝ್ ಕೂಡ ನರೇಂದ್ರ ಮೋದಿ ಅವರ ಟ್ವಿಟ್ ಅನ್ನು ಹಂಚಿಕೊಳ್ಳುವ ಮೂಲಕ ಅಲ್ಲಿನ ನಾಯಕರಗಳನ್ನು ತರಾಟೆಗೆ ತೆಗೆದುಕೊಂಡಿರುವುದು ವಿಶೇಷ.

ಪಂದ್ಯದ ನಂತರದ ಸಂದರ್ಶನವೊಂದರಲ್ಲಿ ಮಾತನಾಡಿದ ಪೂಜಾ ಗೆಲ್ಲೋಟ್, ಚಿನ್ನದ ಪದಕ ಗೆಲ್ಲದಿದ್ದಕ್ಕಾಗಿ ಬೇಸರವಾಗಿದೆ. ಇದಕ್ಕಾಗಿ ನಾನು ಭಾರತೀಯರಲ್ಲಿ ಕ್ಷಮೆಯಾಚಿಸುತ್ತೇನೆ. ನಾನು ಇಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರಗೀತೆಯನ್ನು ನುಡಿಸಬೇಕೆಂದು ಬಯಸಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ನೀವೆಲ್ಲರೂ ನನ್ನನ್ನು ಕ್ಷಮಿಸಬೇಕು. ನನ್ನ ತಪ್ಪುಗಳಿಂದ ಪಾಠ ಕಲಿಯುತ್ತೇನೆ. ಅವುಗಳನ್ನು ಸರಿಪಡಿಸಲು ಮುಂದಾಗುತ್ತೇನೆ ಎಂದು ಕಣ್ಣೀರಿನೊಂದಿಗೆ ಪೂಜಾ ಗೆಲ್ಲೋಟ್ ದೇಶದ ಜನರಲ್ಲಿ ಬಹಿರಂಗ ಕ್ಷಮೆಯಾಚಿಸಿದ್ದರು.

ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟ ಕುಸ್ತಿಪಟುವಿನ ವಿಡಿಯೋ ನೋಡಿದ ಪ್ರಧಾನಿ ಮೋದಿ, ಆಕೆಗೆ ಸಾಂತ್ವನ ಹೇಳಿದ್ದಾರೆ. ಪೂಜಾ, ನಿಮ್ಮ ಪದಕದ ಗೆಲುವಿಗೆ ಸಂಭ್ರಮಿಸಬೇಕೇ ಹೊರತು ಕ್ಷಮೆ ಕೇಳಬೇಕಿಲ್ಲ. ನಿಮ್ಮ ಜೀವನ ಪಯಣ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತೆ. ನಿಮ್ಮ ಯಶಸ್ಸು ನಮಗೆ ಸಂತೋಷವನ್ನು ನೀಡುತ್ತದೆ. ನಿಮ್ಮ ಮುಂದೆ ದೊಡ್ಡ ಗುರಿಗಳಿವೆ..ಹೀಗೆ ಮಿಂಚುತಲ್ಲೇ ಇರಿ..! ಎಂದು ಪ್ರಧಾನಿ ಮೋದಿ ಪೂಜಾ ಗೆಲ್ಲೋಟ್ ಅವರನ್ನು ಹುರಿದುಂಬಿಸಿದ್ದಾರೆ.

Leave A Reply

Your email address will not be published.