ಇನ್ಮುಂದೆ 15 ವರ್ಷಕ್ಕಿಂತ ಹಳೆಯ ವಾಹನ ಗುಜರಿಗೆ -ರಾಜ್ಯದಲ್ಲೂ ಸ್ಕ್ರ್ಯಾಪ್ ನೀತಿ ಜಾರಿ
ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿದ ಸ್ಕ್ರ್ಯಾಪ್ ನೀತಿಯನ್ನು ರಾಜ್ಯದಲ್ಲೂ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಸ್ಕ್ರ್ಯಾಪ್ ನೀತಿಯ ಅನುಸಾರ ರಾಜ್ಯದಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ಲಕ್ಷಾಂತರ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕಬೇಕು.
2021ರ ಸೆ.23ರಂದು ಕೇಂದ್ರ ಸ್ಕ್ರ್ಯಾಪ್ ನೀತಿ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿತ್ತು. ಹೀಗಾಗಿ, 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕುವ ನೀತಿಯನ್ನು ಜಾರಿಗೆ ತಂದಿದೆ. ಇದೀಗ ರಾಜ್ಯ ಸರ್ಕಾರ ಕೂಡ ಈ ಸ್ಕ್ರ್ಯಾಪ್ ನೀತಿಯನ್ನು ಜಾರಿ ಮಾಡಿದೆ.
ವಾಹನದ ಬಿಡಿಭಾಗಗಳ ಕಂಡಿಷನ್ ಆಧರಿಸಿ ಸರ್ಕಾರವು ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಹಣ ನೀಡುತ್ತದೆ. ಸರ್ಕಾರ ನಿಗದಿ ಪಡಿಸುವ ಹಣ ಹಳೇ ವಾಹನದ ರೀಸೇಲ್ ವ್ಯಾಲ್ಯೂಗಿಂತ ಹೆಚ್ಚಿರಲಿದೆ ಅಥವಾ ಸಮಾನಾಗಿ ಇರಲಿದೆ. ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಗಳಿಗೆ ಈ ನೀತಿ ಅನ್ವಯ ಅಧಿಕಾರ ನೀಡಲಾಗಿದೆ.
ಈ ನೀತಿಯಲ್ಲಿ ಹೊಸ ವಾಹನ ಖರೀದಿಗೆ ಪ್ರೋತ್ಸಾಹ ನೀಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಹಳೆ ವಾಹನ ಗುಜರಿಗೆ ಹಾಕಿರುವ ಪ್ರಮಾಣಪತ್ರವನ್ನು ಹೊಸ ವಾಹನ ಖರೀದಿ ವೇಳೆ ತೋರಿಸಿದರೆ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹಳೇ ವಾಹನಗಳ ಗುಜರಿ ಮೌಲ್ಯವನ್ನೂ ನಿಗದಿ ಮಾಡಲಾಗಿದೆ. ಹೊಸ ವಾಹನದ ಎಕ್ಸ್ ಶೋರೂಂ ದರದ ಶೇ.4ರಿಂದ ಶೇ. 6ರಷ್ಟನ್ನು ಗುಜರಿಗೆ ಹಾಕುವ ವಾಹನಕ್ಕೆ ನೀಡಬೇಕು.
ಈ ನೀತಿಯಂತೆ ನೋಂದಣಿ ಅವಧಿ ಮುಗಿದ ಬಳಿಕ ಎಲ್ಲ ವಾಹನಗಳು ಕಡ್ಡಾಯವಾಗಿ ಫಿಟ್ಟೆಸ್ ಪರೀಕ್ಷೆಗೆ ಒಳಗಾಗಬೇಕು. ವಾಣಿಜ್ಯ ಬಳಕೆಯ ವಾಹನಗಳು 15 ವರ್ಷ ಪೂರೈಸಿದ ಕೂಡಲೇ ಫಿಟೈಸ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ವೈಯಕ್ತಿಕ ಬಳಕೆಯ ವಾಹನಗಳಿಗೆ 20 ವರ್ಷ ಪೂರೈಸಿದ ಮೇಲೆ ಫಿಟೈಸ್ ಪರೀಕ್ಷೆ ನಡೆಸಲಾಗುವುದು. ಫಿಟ್ಟೆಸ್ ಪರೀಕ್ಷೆಯಲ್ಲಿ ಫೇಲ್ ಆಗುವ ವಾಹನಗಳನ್ನು ಗುಜರಿಗೆ ಹಾಕಬೇಕಾಗುತ್ತದೆ ಎಂದು ಸರ್ಕಾರ ಹೇಳಿದೆ.