ಸರಕಾರದ ವಿಮಾನಯಾನ ದರ ದ್ವಿಮುಖ ನೀತಿಯಿಂದಾಗಿ ಅನಿವಾಸಿ ಕನ್ನಡಿಗರಿಗೆ ಅನ್ಯಾಯ!
ಅನಿವಾಸಿ ಕನ್ನಡಿಗರ ಅವಿರತ ಹೋರಾಟದ ಫಲವಾಗಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕೊಲ್ಲಿ ದೇಶಗಳಿಂದ ಮಂಗಳೂರಿಗೆ ನೇರ ಪ್ರಯಾಣ ಸಾಧ್ಯವಾದಾಗ ಕರಾವಳಿ ಭಾಗದ ಎಷ್ಟೋ ಕನ್ನಡಿಗರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.
ಆದರೆ ಈ ನೆಮ್ಮದಿ ಈಗ ಸರಕಾರದ ವಿಮಾನಯಾನದ
ದ್ವಿಮುಖ ದರ ನಿಯಮಗಳಿಂದ ಸಂಪೂರ್ಣ ನುಚ್ಚುನೂರಾಗಿದೆ..
ಕೋವಿಡ್ ಸಾಂಕ್ರಾಮಿಕದ ಕಾಲದಿಂದ ವಿಮಾನ ಯಾನದ ದರ ಆಗಾಗ ವಿಪರೀತ ಏರುಪೇರಾಗುತ್ತಿದ್ದುದು ಸರ್ವೇಸಾಮಾನ್ಯವಾಗಿತ್ತು. ಆದರೆ ತದನಂತರವೂ ಅದೇ ಚಾಳಿ ಮುಂದುವರಿದು ಕೊಂಡು ಬಂದಿದ್ದು ನಿತ್ಯ ಪ್ರಯಾಣಿಕರಿಗೆ ಹೊರಲಾರದ ಹೊರೆಯಾಗಿದೆ.
ಅದರಲ್ಲೂ ಕನ್ನಡಿಗರೇ ಈ ದರ ಅನ್ಯಾಯದ ಬಲಿಪಶುಗಳಾಗುವುದು ವಿಪರ್ಯಾಸವೇ ಸರಿ.
ಗಲ್ಫ್ ದೇಶಗಳಿಂದ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಯಾನ ದರದಲ್ಲಿ ವಿಪರೀತ ವ್ಯತ್ಯಾಸಗಳಿವೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಕಣ್ಣಾನೂರು ಪ್ರಯಾಣಿಕರು 450 ಧೀರಂ ದರದಲ್ಲಿ ಪ್ರಯಾಣಿಸಿದರೆ ಮಂಗಳೂರು ಪ್ರಯಾಣಿಕರು ಅದೇ ಪ್ರಯಾಣ ವೇಳೆಯನ್ನು ಅದರ ಎರಡರಷ್ಟು ಅಂದರೆ ಸುಮಾರು 850 ಧೀರಂ ದರ ತೆತ್ತು ಪ್ರಯಾಣಿಸಬೇಕಾಗಿದೆ. ಕೇರಳ ರಾಜ್ಯಕ್ಕೆ ಸರಾಸರಿ ದಿನವೊಂದರ ವಿಮಾನ ಹಾರಾಟವಿದ್ದರೆ ಮಂಗಳೂರಿಗೆ
ವಾರಕ್ಕೆ ಮೂರು ಅಥವಾ ನಾಲ್ಕು ಹಾರಾಟಗಳು ಮಾತ್ರ ಲಭ್ಯ. ಭಾರಿ ದರ ವ್ಯತ್ಯಾಸದಿಂದಾಗಿ ಕಾಸರಗೋಡು ಭಾಗದ ಕನ್ನಡಿಗರು ಕೂಡಾ ಕಣ್ಣಾನೂರು ವಾಯು ಮಾರ್ಗವನ್ನು
ಅವಲಂಬಿಸುವುದು ಅನಿವಾರ್ಯವಾಗುತ್ತಿದ್ದು ಮಂಗಳೂರು ಯಾನದ ದಟ್ಟಣೆಯನ್ನೂ ಕಡಿಮೆ ಮಾಡಿ
ಪ್ರಸ್ತುತ ಮಾರ್ಗ ಲಾಭದಾಯಕವಲ್ಲವೆನ್ನುವ ತಪ್ಪು ಸಂದೇಶವನ್ನೂ ರವಾನಿಸುವಂತಾಗಿದೆ.
ಕೇರಳದ ರಾಜಕೀಯ ನೇತಾರರ ತೀವ್ರಗಾಮಿ ಧೋರಣೆಯಿಂದಾಗಿ ಹೆಚ್ಚಿನ ವಿಮಾನಯಾನ ಸವಲತ್ತುಗಳು ಅವರ ಪಾಲಾಗುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಕೇರಳಕ್ಕೆ ಹೋಲಿಸಿದರೆ ಕರ್ನಾಟಕದ ಅದರಲ್ಲೂ ಕರಾವಳಿ ಭಾಗದ ಶಾಸಕರ ಮತ್ತು ಸಂಸದರ ಇಚ್ಚಾಶಕ್ತಿಯ ಕೊರತೆ ಮತ್ತು ಆಲಸ್ಯ ,ಅಸಡ್ಡೆಯ ಧೋರಣೆಯಿಂದಾಗಿ ಈ ಭಾಗದ ಅನಿವಾಸಿಗಳು ದುಬಾರಿ ಬೆಲೆ ತೆತ್ತು ಅನಿವಾರ್ಯವಾಗಿ ಪ್ರಯಾಣಿಸುವ ದುಸ್ಥಿತಿ ಬಂದೊದಗಿರುವುದು ದುರಾದೃಷ್ಟ. ಅಷ್ಟಕ್ಕೂ ಈ ದರ ವ್ಯತ್ಯಾಸಕ್ಕೆ ಯಾರಲ್ಲಿಯೂ ಸ್ಪಷ್ಟ ಉತ್ತರವಿಲ್ಲ!.
ನಮ್ಮ ಮಂತ್ರಿ ಶಾಸಕರು ಈ ವಿಷಯದಲ್ಲಿ ಆದ್ಯ ಗಮನವಿಟ್ಟು ಈ ವಿಪರೀತ ದರ ವ್ಯತ್ಯಾಸದ ಅನ್ಯಾಯವನ್ನು ಶೀಘ್ರವಾಗಿ ಸರಿಪಡಿಸಲೇ ಬೇಕು.ತಮ್ಮ ನಿಷ್ಕ್ರಿಯ, ನಿರ್ಲಜ್ಜ ಮನೋಭಾವವನ್ನು ಬಿಟ್ಟು ಅನಿವಾಸಿಗಳ ಸಂಕಷ್ಟ ನಿವಾರಣೆಗೆ ಅಗತ್ಯವಾಗಿ ಮತ್ತು ತುರ್ತಾಗಿ ಕಾರ್ಯೋನ್ಮುಖರಾಗಬೇಕು.
ಹೀಗಾದಲ್ಲಿ ಮಾತ್ರ ಚುನಾವಣಾ ಸಂದರ್ಭದಲ್ಲಿ ತಮ್ಮ ಸ್ವಂತ ಖರ್ಚಿನಿಂದ ತಾಯ್ನಾಡಿಗೆ ಬಂದು ತಮ್ಮ ಶಾಸಕ,ಸಂಸದರನ್ನು ಆರಿಸಿ ಕಳುಹಿಸುವ ಅನಿವಾಸಿ ನಾಗರೀಕರಿಗೆ ಒಂದಿಷ್ಟು ಸಮಾಧಾನವಾದೀತು.
ನಮ್ಮನೆಲದ ಶಾಸಕ ಸಂಸದರಿಗೆ ಅನಿವಾಸಿಗಳ ಈ ನೋವು ಸಂಕಷ್ಟಗಳು ಅರ್ಥವಾಗುವುದಾದರೂ ಎಂದು?!
-ಸರ್ವೋತ್ತಮ ಶೆಟ್ಟಿ,ಅಬುದಾಭಿ