ಸುಬ್ರಹ್ಮಣ್ಯ: ನೆರೆಗೆ ನಲುಗಿದ ಬದುಕಿನ ನೋವ ಮರೆಸಿದ ಇಬ್ಬರ ಹಾಜರಿ, ಮೂರು ದಿನಗಳ ಬಳಿಕ ಸಿಕ್ಕ ರಾಜ-ರಾಣಿ !
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ದ ಪುಷ್ಪಗಿರಿ ತಪ್ಪಲಿನಲ್ಲಿ ಸುರಿದ ರಣ ಭೀಕರ ಮಳೆಗೆ ಸುಳ್ಯ ತಾಲೂಕಿನ ಹಲವೆಡೆ ಹಾನಿಯುಂಟಾಗಿರುವ ಬಗ್ಗೆ ಈಗಾಗಲೇ ವರದಿಯಾಗಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಮಳೆ ಕಂಡ ನಿವಾಸಿಗಳ ಬದುಕು ತತ್ತರವಾಗಿದೆ. ಸರ್ಕಾರ, ಜಿಲ್ಲಾಡಳಿತ ನೆರೆ ಸಂತ್ರಸ್ತ ಪ್ರದೇಶಕ್ಕೆ ಭೇಟಿ ಕೊಟ್ಟು ತುರ್ತು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಡುವೆ ಬದುಕೇ ಮುರಿದುಬಿದ್ದರೂ ಅಲ್ಲೊಂದು ಕುಟುಂಬದಲ್ಲಿ ಸಂತೋಷ ಮನೆ ಮಾಡಿದ ವಿಶೇಷ ಘಟನೆಯೊಂದು ಬೆಳಕಿಗೆ ಬಂದಿದ್ದು, ನೆರೆ ನೀರಿಗೆ ಎಲ್ಲವನ್ನೂ ಕಳೆದುಕೊಂಡರೂ ಮರಳಿ ಸಿಕ್ಕ ಆ ಇಬ್ಬರಿಂದಾಗಿ ಆನಂದಭಾಶ್ಪ ಸುರಿದಿದೆ. ಅವರಿಬ್ಬರ ಹಾಜರಿ ದುಗುಡಗೊಂಡ ಮನಸ್ಸುಗಳಿಗೆ ನಿರಾಳತೆ ತಂದಿಟ್ಟಿದೆ.
ಹೌದು. ಇದು ಕೊಳ್ಳಮೊಗ್ರು ಗ್ರಾಮದಲ್ಲಿ ನಡೆದ ಘಟನೆ. ನೆರೆಯ ಭೀಕರತೆಗೆ ಇಲ್ಲಿನ ಲಲಿತ ಎಂಬವರ ಮನೆಯು ಸಂಪೂರ್ಣ ನೆಲಸಮವಾಗಿದ್ದು, ಕೊನೇ ಕ್ಷಣದಲ್ಲಿ ಎಲ್ಲವನ್ನು ಬಿಟ್ಟು ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಆ ಕ್ಷಣಕ್ಕೆ ಜಾನುವಾರುಗಳು ಕೊಟ್ಟಿಗೆಯಲ್ಲೇ ಉಳಿದಿದ್ದು, ಮಾರನೇ ದಿನ ನೋಡಿದಾಗ ಕೊಟ್ಟಿಗೆ ಸಹಿತ ಮನೆ ನೆಲಸಮವಾಗಿದ್ದರಿಂದ ದಾರುಣವಾಗಿ ಮೃತಪಟ್ಟಿದ್ದವು.
ಅದಲ್ಲದೇ ಮನೆಯಲ್ಲಿ ಪ್ರೀತಿಯಿಂದ ಸಾಕಿದ್ದ ಪಮೋರಿಯನ್ ಜಾತಿಯ ಎರಡು ನಾಯಿಮರಿಗಳು ಕೂಡಾ ನೆರೆ ನೀರಿಗೆ ಕೊಚ್ಚಿಕೊಂಡು ಹೋಗಿದ್ದು, ಎಲ್ಲವನ್ನು ಕಳೆದುಕೊಂಡ ಬಳಿಕ ನಾಯಿ ಮರಿಗಳು ಕೂಡಾ ನಾಪತ್ತೆಯಾಗಿದ್ದವು. ಅವುಗಳು ಬೊಳ್ಳಕ್ಕೆ ಕೊಚ್ಚಿ ಹೋಗಿ ಬಿಟ್ಟಿವೆ ಎಂದು ಮನೆಯವರು ಮತ್ತಶ್ಟು ಮನಸ್ಸು ಮುದುಡಿಸಿಕೊಂಡು ಕೂರುವಂತಾಗಿತ್ತು. ಇಷ್ಟೇ ಗಾತ್ರದ ಪುಟಾಣಿ ಪಮೇರಿಯನ್ ನಾಯಿ ಮರಿಗಳು ಇಂತಹ ಜಲ ಸ್ಪೋಟಕ್ಕೆ ಸಿಲುಕಿ ಬದುಕಿ ಬರುವುದು ಅಸಾಧ್ಯ ಎಂದು ಅಂದುಕೊಳ್ಳಲಾಗಿತ್ತು.
ಆದರೆ ಘಟನೆ ನಡೆದ ಮೂರು ದಿನಗಳ ಬಳಿಕ ನಾಯಿ ಮರಿಗಳು ಪತ್ತೆಯಾಗಿದ್ದು, ಮನೆ ಮಂದಿಯನ್ನು ಖುಷಿಯ ಕಡಲಲ್ಲಿ ತೇಲಿಸಿದೆ. ಮನೆ, ಜಾನುವಾರು ಸಹಿತ ಬದುಕನ್ನೇ ಕಸಿದ ಜವರಾಯ ನಾಯಿ ಮರಿಗಳನ್ನು ಉಳಿಸಿದ್ದು, ನೋವಿನಲ್ಲಿದ್ದ ಕುಟುಂಬದ ಮೊಗದಲ್ಲಿ ಅರೆ ಕ್ಷಣ ಖುಷಿ ತುಂಬಿದಂತಾಗಿದೆ. ಸದ್ಯ ಲಲಿತ ಅವರ ಮಗ ನಾಯಿ ಮರಿಗಳನ್ನು ಹಿಡಿದುಕೊಂಡಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬದುಕೇ ಇಲ್ಲದಾದ ನೋವನ್ನು ನಾಯಿಮರಿಗಳ ಹಾಜರಿ ಮರೆಸುತ್ತಿದೆ. ಎರಡು ಪುಟಾಣಿ ಜೀವಿಗಳು ಈಗ ಮುರಿದ ಮನೆ ಮತ್ತು ಮನಸ್ಸುಗಳಿಗೆ ಚೈತನ್ಯ ನೀಡಿವೆ. ಬದುಕು ಕಟ್ಟುವ ಕೆಲಸ ಮತ್ತೆ ಶುರುವಾಗಿದೆ.