ಅಂಗನವಾಡಿ ಸೌಲಭ್ಯ ಪಡೆಯಲು ಆಧಾರ್ ನೋಂದಣಿ ಕಡ್ಡಾಯ; ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ
ಅಂಗನವಾಡಿ ಸೇವಾ ಯೋಜನೆಗಳ ಲಾಭ ಎಲ್ಲ ಅರ್ಹ ಫಲಾನುಭವಿಗಳಿಗೆ ಸಿಗುತ್ತದೆ. ಆದರೆ, ಅರ್ಹ ಫಲಾನುಭವಿಗಳು ಆನ್‌ಲೈನ್ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿದ್ದರೆ ಮಾತ್ರ ಈ ಪ್ರಯೋಜನಗಳನ್ನು ಪಡೆಯಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಅಂಗನವಾಡಿ ಪ್ರಯೋಜನ ಪಡೆಯಲು ಮಗುವಿನ ಆಧಾರ್ ಕಾರ್ಡ್ ಸಂಖ್ಯೆಯನ್ನು ನೋಂದಾಯಿಸುವ ಅಗತ್ಯವಿಲ್ಲ. ಅದರ ಬದಲು, ಮಗುವಿನ ತಾಯಿಯ ಆಧಾರ್ ಕಾರ್ಡ್ ನೋಂದಣಿ ಕಡ್ಡಾಯವಾಗಿದೆ ಎಂದು ಸರ್ಕಾರ ತಿಳಿಸಿದೆ.
“ಸಕ್ಷಮ್ ಅಂಗನವಾಡಿ, “ಪೋಷಣ್ 2′ ಯೋಜನೆಗಳ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಗಳಲ್ಲಿ ಈ ವಿಚಾರ ಸೇರಿಸಲಾಗಿದೆ.
ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದಿಂದ ಮಂಗಳವಾರ ಬಿಡುಗಡೆಯಾದ ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2 ನೀತಿಯ ನೂತನ ಮಾರ್ಗಸೂಚಿಗಳ ಕುರಿತಾಗಿ ಸ್ಪಷ್ಟನೆ ನೀಡಲಾಗಿದೆ. ಜಾತಿ, ಧರ್ಮ, ಆದಾಯ ಗಳಿಕೆ ಮಾನದಂಡಗಳ ತಾರತಮ್ಯ ರಹಿತವಾಗಿ ಫಲಾನುಭವಿಗಳು ಅಂಗನವಾಡಿ ಸೇವೆಗಳನ್ನು ಪಡೆಯಬಹುದು. ಮಕ್ಕಳು ಅಂಗನವಾಡಿ ಸೌಲಭ್ಯ ಪಡೆದುಕೊಳ್ಳಲು ಅವರ ಆಧಾರ್ ಕಾರ್ಡ್ ಕಡ್ಡಾಯ ಆಗಿರುವುದಿಲ್ಲ. ತಾಯಿಯ ಆಧಾರ್ ಕಾರ್ಡ್ ನೋಂದಣಿಯಾಗಿರಬೇಕು. 14 ರಿಂದ 18 ವರ್ಷದ ಹೆಣ್ಣು ಮಕ್ಕಳ ಯೋಜನೆಯ ಲಾಭ ಪಡೆದುಕೊಳ್ಳಲು ಆಧಾರ್ ಸಂಖ್ಯೆ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ಹೇಳಲಾಗಿದೆ.