ಮಾಜಿ ಸಿಎಂ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಂಭ್ರಮ ಆರಂಭ
‘ದೇವ ನಗರಿ’ ದಾವಣಗೆರೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 75ನೇ ಹುಟ್ಟು ಹಬ್ಬದ ಅಂಗವಾಗಿ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ವಾಹನಗಳ ಮೂಲಕ ಗಣ್ಯರು, ಅಭಿಮಾನಿಗಳು ದಾವಣಗೆರೆಯತ್ತ ಧಾವಿಸುತ್ತಿದ್ದು, ದಾವಣಗೆರೆ ನಗರ ಜನಜಂಗುಳಿಯಿಂದ ತುಂಬಿ ತುಳುಕುತ್ತಿದೆ. ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ವೇದಿಕೆ ಸಜ್ಜಾಗಿದೆ. ರಾಜ್ಯದ ಯಾವುದೇ ನಾಯಕ ಇಂತಹ ಹುಟ್ಟು ಹಬ್ಬ ಆಚರಿಸಿದ ನಿರ್ದಶನ ಇಲ್ಲ. ಇದೀಗ ಸಿದ್ದರಾಮಯ್ಯ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.
ಸುಮಾರು 6 ಲಕ್ಷ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 50 ಎಕರೆ ಪ್ರದೇಶದಲ್ಲಿ ಕಾರ್ಯಕ್ರಮ ನಡೆಯಲಿದೆ. ವೇದಿಕೆಯಲ್ಲಿ 150 ಮಂದಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಕಾರ್ಯಕರ್ತರನ್ನು ಕರೆ ತರಲು ವಿಶೇಷ ವಾಹನದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಒಟ್ಟು ಖರ್ಚು 75 ಕೋಟಿ ರೂಪಾಯಿಗಳು ಎಂದು ಹೇಳಲಾಗುತ್ತಿದೆ.ಆದರೆ ಅಧಿಕೃತವಾಗಿ ಯಾರೂ ಅಂಕಿ ಅಂಶ ಬಿಡುಗಡೆ ಮಾಡಿಲ್ಲ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಕಾರ್ಯಕ್ರಮದಲ್ಲಿ
ಭಾಗವಹಿಸುತ್ತಿದ್ದಾರೆ. ಹುಟ್ಟು ಹಬ್ಬ ಒಂದು ನೆಪ. ಅವರ ಗುರಿ ಕಾಂಗ್ರೆಸ್ ನಲ್ಲಿ ತಮ್ಮ ಶಕ್ತಿ ಪ್ರದರ್ಶನ ಎಂಬುದು ಸಿದ್ದರಾಮಯ್ಯ ಅವರ ಆಪ್ತರು ಹೇಳಿದ್ದಾರೆ.
ಬೆಳಗ್ಗೆ 10 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ತಂಡ ಇದನ್ನು ನಡೆಸಿಕೊಡಲಿದೆ. ಮಧ್ಯಾಹ್ನ 12ಕ್ಕೆ ಅಮೃತ ಮಹೋತ್ಸವ ಕಾರ್ಯಕ್ರಮ ಶುರುವಾಗಲಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಕೆಲವೇ ಕೆಲವು ಗಣ್ಯರು ಮಾತನಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಮುಕ್ತಾಯಗೊಳಿಸಲು ಆಯೋಜಕರು ಚಿಂತನೆ ನಡೆಸಿದೆ.