ಅವನಲ್ಲಿ ಇವಳಿಲ್ಲಿ ; ಮದುವೆಯಾಗಲು ಪರದಾಡಿದ ಈ ಜೋಡಿಗೆ ಆನ್ಲೈನ್ ನಲ್ಲಿ ಮದುವೆಗೆ ಗ್ರೀನ್ ಸಿಗ್ನಲ್
ಆಕೆ ಅಲ್ಲೊಂದು ಕಡೆ ಈತ ಇನ್ನೊಂದು ಕಡೆ. ಆದ್ರೆ ಇಬ್ಬರ ಹೃದಯ ಮಿಡಿಯುತ್ತಿದೆ ಒಂದೇ. ನೀನು ನನ್ನವ ಎಂದು. ಹೀಗಾಗಿ, ಈ ಜೋಡಿ ಮದುವೆಯಾಗಲು ನಿರ್ಧರಿಸಿದ್ದಾರೆ. ಹೌದು. ಇದು ಭಾರತ ಮತ್ತು ಅಮೆರಿಕದ ಯುವಕ- ಯುವತಿಯರ ನಡುವಿನ ಪ್ರೇಮ್ ಕಹಾನಿ. ದೂರ-ದೂರದಲ್ಲಿರುವ ಇವರು ಇದೀಗ ಆನ್ಲೈನ್ ಮೂಲಕ ಮದುವೆ ಮಾಡಿಕೊಳ್ಳಲು ಹೊರಟ್ಟಿದ್ದಾರೆ.
ಮದುವೆಗೆ ಸಿದ್ಧವಾದ ಈ ಜೋಡಿ ಕಾರಣಾಂತರಗಳಿಂದ ಒಟ್ಟಿಗೇ ಸೇರಿ ಮದುವೆಯಾಗುವುದು ಅಸಾಧ್ಯವಾಗಿದೆ. ಆದ್ದರಿಂದ ಆನ್ಲೈನ್ ಮೂಲಕ ಇವರು ಮದುವೆ ಮಾಡಿಕೊಳ್ಳಲು ರೆಡಿ ಆಗಿದ್ದು, ಹೈಕೋರ್ಟ್ ಕೂಡ ಅನುಮತಿ ನೀಡಿದೆ.
ಇದು ತಮಿಳುನಾಡಿನ ಕನ್ಯಾಕುಮಾರಿಯ ಯುವತಿ ಸುದರ್ಶಿನಿ ಹಾಗೂ ಅಮೆರಿಕ ಪ್ರಜೆ ರಾಹುಲ್ ಮಧು ಅವರ ಲವ್ ಸ್ಟೋರಿ. ಸದ್ಯ ವರ್ಚುವಲ್ ಮೋಡ್ ಮೂಲಕ ಮದುವೆಯಾಗಲು ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ ಅನುಮತಿ ನೀಡಿದ್ದು, ಮದುವೆಗೆ ಸಕಲ ಸಿದ್ಧತೆ ನಡೆದಿದೆ.
ಸುದರ್ಶಿನಿ ಹಾಗೂ ಮಧು ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಲು ಬಯಸಿದ್ದರು. ಆ ಸಂದರ್ಭದಲ್ಲಿ ರಾಹುಲ್ ಭಾರತಕ್ಕೆ ಭೇಟಿ ನೀಡಿದ್ದರು. ಮದುವೆಯ ಸಂಬಂಧ ಕಳೆದ ಮೇ 5ರಂದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಸಬ್ ರಿಜಿಸ್ಟ್ರಾರ್ಗೆ ಅರ್ಜಿ ಸಲ್ಲಿಸಿದ್ದರು. ನಿಯಮದ ಪ್ರಕಾರ, 30 ದಿನಗಳ ಕಾಯುವಿಕೆ ಅವಧಿ ಇರುತ್ತದೆ. ಇಂಥ ಸಂದರ್ಭದಲ್ಲಿ ಯಾರಾದರೂ ಇದಕ್ಕೆ ಆಕ್ಷೇಪಣೆ ಸಲ್ಲಿಸುತ್ತಾರೆಯೇ ಎಂದು ನೋಡುತ್ತಾರೆ.
ಈ ವೇಳೆ ಈ ಮದುವೆ ರಾಹುಲ್ ತಂದೆಯವರಿಗೆ ಇಷ್ಟವಿರದ ಕಾರಣ ಅವರು ಮದುವೆಗೆ ಆಕ್ಷೇಪಣೆ ಸಲ್ಲಿಸಿದ್ದರು. ಬಳಿಕ, ವಿಚಾರಣೆ ನಡೆದಾಗ, ಈ ರೀತಿ ಆಕ್ಷೇಪಣೆಗಳು ಸಮಂಜಸವಲ್ಲ ಎಂಬ ತೀರ್ಮಾನಕ್ಕೆ ನೋಂದಣಿ ಅಧಿಕಾರಿ ಹೇಳಿದ್ದಾರೆ. ಆದ್ದರಿಂದ ವಿವಾಹಕ್ಕೆ ಸಮ್ಮತಿಸಿದರು.
ಈ ನಡುವೆಯೇ ರಾಹುಲ್ ವಾಪಸ್ ಹೋಗಿದ್ದರು. ಆದರೆ ವೀಸಾಕ್ಕೆ ಸಂಬಂಧಿಸಿದಂತೆ ಕೆಲವೊಂದು ಕಾನೂನು ಸಮಸ್ಯೆ ಇರುವ ಕಾರಣ ರಾಹುಲ್ ಭಾರತಕ್ಕೆ ಹಿಂತಿರುಗಲು ಸಾಧ್ಯವಾಗಿಲ್ಲ. ಯುವತಿ ತವರಿನಲ್ಲಿಯೇ ಇದ್ದರು. ಈ ಸಮಯದಲ್ಲಿ ರಿಜಿಸ್ಟ್ರಾರ್ ಕಚೇರಿಯ 30 ದಿನಗಳ ನೋಟಿಸ್ ಅವಧಿ ಮುಗಿದ ಕಾರಣ, ಜೋಡಿ ಮದುವೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಕೋರ್ಟ್ ಮೊರೆ ಹೋಗಿದ್ದರು.
ಮದುವೆ ಮಾನವನ ಮೂಲಭೂತ ಹಕ್ಕು, ಆದ್ದರಿಂದ ವಿಶೇಷ ವಿವಾಹ ಕಾಯ್ದೆ 1954 ರ ಸೆಕ್ಷನ್ 12 ಮತ್ತು 13ರ ಅಡಿ ಇವರ ವಿವಾಹ ನಡೆಯಬಹುದು ಎಂದು ಹೇಳಿದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಆನ್ಲೈನ್ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದರು. 1954ರ ಹಿಂದೂ ವಿಶೇಷ ವಿವಾಹ ಕಾಯ್ದೆಯಡಿ ವಿವಾಹ ನೋಂದಣಿ ಮಾಡಿಸಿ ವಿವಾಹ ಪ್ರಮಾಣಪತ್ರ ನೀಡಬೇಕು ಎಂದು ಮಾಡಿಕೊಂಡ ಈ ಜೋಡಿಯ ಅರ್ಜಿ ಪುರಸ್ಕೃತವಾಗಿದೆ.
ಮೂರು ಸಾಕ್ಷಿಗಳ ಸಮ್ಮುಖದಲ್ಲಿ ವರ್ಚುವಲ್ ಮೋಡ್ ಮೂಲಕ ಇವರ ವಿವಾಹಕ್ಕೆ ಬೇಕಾಗಿರುವ ಸಕಲ ದಾಖಲೆಗಳನ್ನು ನೀಡುವಂತೆ ಕೋರ್ಟ್ ಸಬ್ ರಿಜಿಸ್ಟ್ರಾರ್ಗೆ ನಿರ್ದೇಶಿಸಿದೆ. ಒಟ್ಟಾರೆ, ಭಾರತ ಮತ್ತು ಅಮೆರಿಕದ ಯುವಕ- ಯುವತಿಯರ ಆನ್ಲೈನ್ ಮದುವೆಗೆ ಗ್ರೀನ್ ಸಿಗ್ನಲ್ ದೊರಕಿದೆ.