ಸುಳ್ಯ : ಒಂದು ವಾರದಿಂದ ತಣ್ಣಗಿದ್ದ ಮಳೆ ಈಗ ಮತ್ತೆ ಎಡಬಿಡದೆ ಸುರಿಯೋಕೆ ಶುರುವಾಗಿದೆ. ಸತತ ಎರಡು ಗಂಟೆಗಳಿಗಿಂತ ಸುಳ್ಯ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಭೀಕರ ಮಳೆಯಾಗುತ್ತಿದೆ. ಕೊಲ್ಲಮೊಗ್ರ, ಕಲಕಾರು, ಕಲ್ಲಾಜೆ, ಹರಿಹರ, ಬಾಳುಗೋಡು ಪ್ರದೇಶದಲ್ಲಿ ಭೀಕರ ಮಳೆಯಾಗುತ್ತಿದೆ.
ಕಲ್ಲಾಜೆಯಲ್ಲಿ 4 ಗಂಟೆಯಿಂದ ಆರಂಭವಾದ ಮಳೆ ಸತತವಾಗಿ ಸುರಿಯುತ್ತಲೇ ಇದೆ. ಇಲ್ಲಿಯವರೆಗೆ 150 ಮಿಮೀಗಿಂತಲೂ ಅಧಿಕ ಮಳೆ ಸುರಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಭಾರೀ ಮಳೆಗೆ ಹೊಳೆ ನೀರು ಹಕ್ಕಿ ಹರಿದು ಕೊಲ್ಲಮೊಗ್ರ ಹಾಗೂ ಹರಿಹರದಲ್ಲಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.
ನಿನ್ನೆ ತಡರಾತ್ರಿ ಸುಮಾರು 2 ಗಂಟೆಗೆ ಭಾರೀ ಮಳೆ ಆರಂಭವಾಗಿತ್ತು. ಆರಂಭದಲ್ಲಿ ಕಲಕಾರು ಎಸ್ಟೇಟ್ ಪ್ರದೇಶದಲ್ಲಿ ಜಲಸ್ಫೋಟಗೊಂಡು ನೀರು ಹರಿಯಲು ಆರಂಭವಾಗಿತ್ತು. ಇದೇ ವೇಳೆಗೆ ಸಮೀಪದ ಜನರಿಗೆ ಸದ್ದು ಕೇಳಿದೆ. ಆದರೆ ಮಳೆಯ ಕಾರಣದಿಂದ ಹೊರಗಡೆ ಹೋಗಿರಲಿಲ್ಲ. ಸುಮಾರು 3 ಗಂಟೆಯ ಆಸುಪಾಸಿನಲ್ಲಿ ಭಾರೀ ನೀರು ಕಲ್ಮಕಾರು ಪ್ರದೇಶದ ಇಡ್ಯಡ್ಕ ಮೊದಲಾದ ಕಡೆ ಭಾರೀ ನೀರು ಹರಿದಿದೆ. ತೋಟದ ಪೂರ್ತಿ ಕಲುಷಿತ ನೀರು ಹಾಗೂ ಮರ ಬಿದ್ದುಕೊಂಡಿದೆ. ಇಡ್ಯಡ್ಕದ ಕೆಲವು ಮನೆಯ ಸಮೀಪದವರೆಗೂ ನೀರು ಬಂದಿತ್ತು. ಅನೇಕರಿಗೆ ಭಾರೀ ಮಳೆಯಿಂದ ನೀರು ಬಂದಿರುವುದು ತಿಳಿಯಲೇ ಇಲ್ಲ. ಬೆಳಗ್ಗೆ ನೋಡಿದಾಗ ಜನರಿಗೆ ತಿಳಿದಿದೆ.
ಎರಡು ದಿನಗಳ ಹಿಂದೆ ಇಡ್ಯಡ್ಕದ ಕಾಲು ಸಂಕ ತುಂಡಾಗಿತ್ತು. ಇದೀಗ ಕಲಕಾರು ಕಡೆಗೆ ಸಂಪರ್ಕ ಕಡಿತಗೊಂಡಿದೆ. ಕಲಕಾರು ಎಸ್ಟೇಟ್ ಪ್ರದೇಶದಲ್ಲಿ ಏನಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಕಲಕಾರು ಸೇತುವೆ ಕೂಡಾ ಹಾನಿಯಾಗಿದೆ.
ಹರಿಹರದಲ್ಲಿಯೂ ಹೊಳೆ ತುಂಬಿ ಹರಿಯುತ್ತಿದೆ. ಬಾಳುಗೋಡು ಸಂಪರ್ಕ ರಸ್ತೆಯಲ್ಲಿರುವ ಸೇತುವೆ ಮುಳುಗಡೆಯಾಗಿದೆ. ಕಲ್ಲಾಜೆಯಲ್ಲಂತೂ ಭಾರೀ ಮಳೆಯಿಂದ ಹೊಳೆ, ತೋಡುಗಳು ತುಂಬಿ ಹರಿಯುತ್ತಿದ್ದು, ಗ್ರಾಮೀಣ ಭಾಗದ ಜನ ಆತಂಕಕ್ಕೆ ಒಳಗಾಗಿದ್ದಾರೆ.
You must log in to post a comment.