ಸುಳ್ಯ : ಮಸೂದ್ ಮನೆಗೆ ಕುಮಾರಸ್ವಾಮಿ ಭೇಟಿ, 5 ಲಕ್ಷ ಚೆಕ್ ನೀಡಿ ಮನೆ ಮಂದಿಗೆ ಸಾಂತ್ವನ ಹೇಳಿದ ಹೆಚ್ ಡಿ ಕೆ
ಸುಳ್ಯ: ಕಳಂಜ ಗ್ರಾಮದ ಮಸೂದ್ ಇತ್ತೀಚೆಗೆ ದುಷ್ಕರ್ಮಿಗಳಿಂದ ಹಲ್ಲೆಗೀಡಾಗಿ ಹತ್ಯೆಯಾಗಿದ್ದ. ಮಸೂದ್ ಮನೆಗೆ ಇಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಬೆಳಗ್ಗೆ ಭೇಟಿ ನೀಡಿ ಮನೆ ಮಂದಿಗೆ ಸಾಂತ್ವನ ಹೇಳಿದ್ದಾರೆ.
ಭೇಟಿಯಾದ ಸಂದರ್ಭ ಮನೆಯಲ್ಲಿದ್ದ ಮಸೂದ್ ಅವರ ಸಹೋದರರು, ಚಿಕ್ಕಪ್ಪ ಸೇರಿ ಇಡೀ ಕುಟುಂಬಕ್ಕೆ ಸಾಂತ್ವನ ಹೇಳಿದ ಮಾಜಿ ಮುಖ್ಯಮಂತ್ರಿ, ಸಂತ್ರಸ್ತ ಕುಟುಂಬಕ್ಕೂ ಪರಿಹಾರವಾಗಿ 5 ಲಕ್ಷ ರೂ. ಚೆಕ್ ಅನ್ನು ಹಸ್ತಾಂತರ ಮಾಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, “ಮಸೂದ್ ಅಮಾಯಕ. ಪೈಂಟರ್ ಆಗಿ ದುಡಿಯುತ್ತಿದ್ದ ಆತ ಯಾವುದೇ ಸಂಘಟನೆಗಳಲ್ಲಿ ಗುರುತಿಸಿಕೊಂಡಿರಲಿಲ್ಲ. ಈ ಬಗ್ಗೆ ನನಗೆ ಲಭಿಸಿರುವ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದೇನೆ” ಎಂದು ಹೇಳಿದರು.
ಈ ಸಂದರ್ಭ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಭೋಜೆಗೌಡ, ಪಕ್ಷದ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ, ರಾಜ್ಯ ಕಾರ್ಯದರ್ಶಿ ಇಕ್ವಾಲ್ ಎಲಿಮಲೆ, ಸುಳ್ಯ ಜೆಡಿಎಸ್ ಅಧ್ಯಕ್ಷ ಸುಕುಮಾರ್ ಕೋಡುಗುಳಿ, ರಾಕೇಶ್ ಕುಂಟಿಕಾನ, ನಪಂ ಸದಸ್ಯ ಕೆ.ಎಸ್.ಉಮರ್, ರಮೀಝಾ ಬಾನು, ಹೈದರ್ ಪರ್ತಿಪ್ಪಾಡಿ, ಸುಶೀಲ್ ನೊರೋನ್ಹಾ, ಸೈಯದ್ ಮೀರಾ ಸಾಹೇಬ್ ಕಡಬ, ರತ್ನಾಕರ ಸುವರ್ಣ ಸುಮತಿ ಹೆಗ್ಡೆ, ಅಶ್ರಫ್ ಕಲ್ಲೇಗ ಮತ್ತಿತರರು ಉಪಸ್ಥಿತರಿದ್ದರು.