ಸಾಮಾಜಿಕ ಜಾಲತಾಣದಲ್ಲಿ ‘ತ್ರಿವರ್ಣ ಧ್ವಜ’ವನ್ನು ಪ್ರೊಫೈಲ್ ಆಗಿ ಬಳಸಿ : ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಇಂದು 91 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದು, ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಕುರಿತು ಮಾತನಾಡಿದ್ದಾರೆ.

 

ಈ ಬಾರಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಆರಂಭದಲ್ಲಿಯೇ ಆಜಾದಿ ಕಿ ಅಮ್ರತ್ ಮಹೋತ್ಸವದ ಕಾರ್ಯಕ್ರಮಗಳ ಕುರಿತು ಮಾತನಾಡಿದ್ದಾರೆ. ದೇಶದ 75ನೇ ಸ್ವಾತಂತ್ರ್ಯದ ಕುರಿತು ಮಾತನಾಡಿದ ಪ್ರಧಾನಿ, ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಂಡಿದ್ದಾರೆ. ಬಳಿಕ ಈ ಬಾರಿಯ ಸ್ವಾತಂತ್ರ್ಯ ಮಹೋತ್ಸವದ ಕುರಿತಾದ ಕರ್ನಾಟಕದ “ಅಮೃತ ಭಾರತಿಗೆ ಕನ್ನಡಾರತಿ” ಅಭಿಯಾನದ ಬಗ್ಗೆ ಮತ್ತು ಯಾವ ರೀತಿ ಕರ್ನಾಟಕದಲ್ಲಿ ಈ ಅಭಿಯಾನ ನಡೆಯುತ್ತಿದೆ ಎಂಬುದನ್ನು ಹೇಳಿದರು.

ಆಗಸ್ಟ್ 2 ಮತ್ತು 15 ರ ನಡುವಿನ ಅವಧಿಯಲ್ಲಿ ದೇಶದ ನಾಗರಿಕರು ತಮ್ಮ ಸಾಮಾಜಿಕ ಜಾಲತಾಣದ ಪ್ರೊಫೈಲ್ ಚಿತ್ರದಲ್ಲಿ ‘ತ್ರಿವರ್ಣ ಧ್ವಜವನ್ನು’ ಬಳಸುವಂತೆ ಅವರು ಒತ್ತಾಯಿಸಿದ್ದಾರೆ.

‘ಆಗಸ್ಟ್ 13 ರಿಂದ 15 ರವರೆಗೆ ‘ಸ್ವಾಂತ್ರ್ಯೋತ್ಸವದ ಅಮೃತಮಹೋತ್ಸವದ’ದ ಅಡಿಯಲ್ಲಿ ‘ಹರ್ ಘರ್ ತಿರಂಗ’ ಎಂಬ ವಿಶೇಷ ಆಂದೋಲನವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ‘ನಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಈ ಆಂದೋಲನವನ್ನು ಮತ್ತಷ್ಟು ವ್ಯಾಪಕವಾಗಿಸೋಣ’ ಎಂದೂ ಅವರು ಕರೆ ನೀಡಿದರು.

‘ಭಾರತವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿದಾಗ, ನಾವೆಲ್ಲರೂ ಅದ್ಭುತ ಮತ್ತು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದೇವೆ’ ಎಂದು ಮೋದಿ ಹೇಳಿದರು. ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೇಶದ 75 ರೈಲ್ವೇ ನಿಲ್ದಾಣಗಳಿಗೆ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳ ಹೆಸರನ್ನು ಇಡಲಾಗಿದೆ. ಅಂತಹ ನಿಲ್ದಾಣಗಳಿಗೆ ಕುಟುಂಬ ಸಮೇತ ಭೇಟಿ ನೀಡಿ, ಮಹಾನ್​ ನಾಯಕರ ಬಗ್ಗೆ ಯುವಪೀಳಿಗೆಗೆ ಮಾಹಿತಿ ನೀಡಿ ಎಂದರು.

ಮನ್ ಕಿ ಬಾತ್ ಕಾರ್ಯಕ್ರಮ, ಆಕಾಶವಾಣಿ ಮತ್ತು ದೂರದರ್ಶನದ ಎಲ್ಲ ಕೇಂದ್ರಗಳಿಂದ ಕಾರ್ಯಕ್ರಮವು ಒಂದೇ ಸಮಯದಲ್ಲಿ ಪ್ರಸಾರಗೊಳ್ಳಲಿದೆ. ಆಕಾಶವಾಣಿಯ ನ್ಯೂಸ್ ವೆಬ್​ಸೈಟ್​ ಮತ್ತು ನ್ಯೂಸ್​ ಆನ್ ಏರ್ ಮೊಬೈಲ್ ಆಪ್​ಗಳಲ್ಲಿಯೂ ಮನ್ ಕಿ ಬಾತ್ ಕಾರ್ಯಕ್ರಮವನ್ನು ಲೈವ್ ಆಗಿ ಕೇಳಬಹುದು. ಆಕಾಶವಾಣಿ, ದೂರದರ್ಶನ ಮತ್ತು ಪ್ರಧಾನಿ ಕಚೇರಿಯ ಯುಟ್ಯೂಬ್​ ಚಾನೆಲ್​ಗಳ ಮೂಲಕವೂ ಭಾಷಣವನ್ನು ಕೇಳಬಹುದಾಗಿದೆ.

Leave A Reply

Your email address will not be published.