ಪ್ರವೀಣ್ ನೆಟ್ಟಾರು ಹತ್ಯೆ : ಹತ್ಯೆಗೂ ಮುನ್ನ ಬೀದಿ ದೀಪಗಳನ್ನು ಆಫ್ ಮಾಡಿದ್ರಾ ಹಂತಕರು ?

ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ. ಇದರ ತನಿಖೆಯ ಜಾಡು ಹಿಡಿದ ಪೊಲೀಸರಿಗೆ ಸ್ಫೋಟಕ ಸತ್ಯವೊಂದು ಬಯಲಾಗಿದೆ.

 

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಹತ್ಯೆಯ ಪತ್ತೆಯಲ್ಲಿ ಪೊಲೀಸರ ಒಂದು ಟೀಮ್ ಕರ್ನಾಟಕದಲ್ಲಿ, ಮತ್ತೊಂದು ಟೀಮ್ ಕೇರಳದಲ್ಲಿ ಮತ್ತೊಂದು ಟೀಮ್ ಟೆಕ್ನಿಕಲ್ ಸಾಕ್ಷ್ಯ ಕಲೆ ಹಾಕುವಲ್ಲಿ ನಿರತವಾಗಿದೆ. ಇನ್ನೊಂದು ತಂಡ ಆರೋಪಿಗಳಿಂದ ಸತ್ಯ ಹೊರಹಾಕಿಸುವ ಪ್ರಯತ್ನದಲ್ಲಿದೆ. ಈಗ ಪೊಲೀಸರಿಗೆ ತಿಳಿದು ಬಂದಿರುವ ಸತ್ಯವೇನೆಂದರೆ, ಪ್ರವೀಣ್ ನೆಟ್ಟಾರು ಹತ್ಯೆ ಪೂರ್ವನಿಯೋಜಿತ ಕೃತ್ಯ ಎನ್ನುವುದು. ಹತ್ಯೆ ಯಾವ ರೀತಿ ಸಂಚು ರೂಪಿಸಲಾಗಿತ್ತು ಎಂಬ ಬಗ್ಗೆ ಮಾಹಿತಿಯೊಂದು ತಿಳಿದು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ಹತ್ಯೆಯಾಗಿತ್ತು. ಪ್ರವೀಣ್ ಹತ್ಯೆಗೂ ಮುನ್ನ ಹಂತಕರು ಸ್ಟ್ರೀಟ್ ಲೈಟ್ ಆಫ್ ಮಾಡಿ ಬಳಿಕ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಈ ಕೃತ್ಯದ ಹಿಂದೆ ಶಫೀಕ್, ಜಾಕೀರ್ ಪಾತ್ರವಿದೆ ಎಂಬುದು ದೃಢವಾಗಿದೆ. ಹಾಗೂ ಪೊಲೀಸರು ಶಫೀಕ್ ಮನೆಯ ಶೋಧಕ್ಕೆ ಮುಂದಾಗಿದ್ದಾರೆ.

ಶಫೀಕ್ ಮನೆ ಬೆಳ್ಳಾರೆ ಮುಖ್ಯರಸ್ತೆಯಲ್ಲಿ ಇದ್ದು, ಈತ ಬಾಡಿಗೆ ಮನೆ ಪಡೆದು ತಂದೆ ತಾಯಿ ಜೊತೆ ವಾಸವಾಗಿದ್ದ. ಅಷ್ಟು ಮಾತ್ರವಲ್ಲದೇ ಇದೇ ಮನೆಯಲ್ಲಿ ಕುಳಿತು ಪ್ರವೀಣ್ ಹತ್ಯೆಗೆ ಬಲೆ ಹೆಣೆಯಲಾಗಿತ್ತು ಎನ್ನಲಾಗುತ್ತಿದೆ. ಈ ಮನೆ ಬೆಳ್ಳಾರೆ ಠಾಣೆಯಿಂದ 300 ಮೀಟರ್ ದೂರದಲ್ಲೇ ಇದೆ. ಹಾಗೂ ಪ್ರವೀಣ್ ಅಂಗಡಿಯಿಂದ 500 ಮೀಟರ್ ದೂರದಲ್ಲಿದೆ. ಇದೇ ಮನೆಯಲ್ಲಿ ಕುಳಿತು ಪ್ರವೀಣ್ ಚಲನವಲನ ಗಮನಿಸಿ ಕೊಲೆಗೆ ಹಂತಕರು ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ದುಷ್ಕರ್ಮಿಗಳು ವ್ಯವಸ್ಥಿತವಾಗಿ ಸಂಚು ರೂಪಿಸಿದ್ದು, ಪ್ರವೀಣ್ ಹತ್ಯೆಗೂ ಮುನ್ನ ದಾರಿದೀಪಗಳನ್ನು ಆಫ್ ಮಾಡಿದ್ದಾರೆ. ಕೊಲೆ ದಿನ ಆ ಏರಿಯಾದಲ್ಲಿ ಕರೆಂಟ್ ಇದ್ದರೂ ಪವರ್ ಕಟ್ ಆಗಿತ್ತು. ಪ್ರವೀಣ್ ಅಂಗಡಿಯ 500 ಮೀಟರ್ ಸುತ್ತಾ ಮುತ್ತಾ ಆರೋಪಿಗಳು ಪವರ್ ಕಟ್ ಮಾಡಿಸಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ನಂತರ ದುಷ್ಕರ್ಮಿಗಳು ಪ್ರವೀಣ್ ಅಂಗಡಿ ಬಳಿ ತೆರಳಿ ಮರ್ಡರ್ ಮಾಡಿದ್ದಾರೆ. ಹಾಗಾಗಿ ಯಾವ ಸಿಸಿಟಿವಿ ಕ್ಯಾಮೆರಾದಲ್ಲೂ ಆರೋಪಿಗಳ ಚಹರೆ ಸಿಕ್ಕಿಲ್ಲ. ಕೊಲೆ ಬಳಿಕ ಕಾದು ಕುಳಿತಿದ್ದ ಶಫೀಕ್, ಜಾಕಿರ್, ಹಂತಕರನ್ನು ಕರೆದೊಯ್ದಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರು ಮನೆ ಮಾಲೀಕರನ್ನು ವಿಚಾರಣೆ ನಡೆಸುತ್ತಿದ್ದಾರೆ. ಒಂದು ವರ್ಷದಿಂದ ಇದೇ ಮನೆಯಲ್ಲಿ ವಾಸವಿರೋದಾಗಿ ಮಾಹಿತಿ ಸಿಕ್ಕಿದೆ.

Leave A Reply

Your email address will not be published.