ಡೆಂಗ್ಯೂಗೆ ಸಂಬಂಧಪಟ್ಟಂತೆ ಕೆಲವೊಂದು ಸುಳ್ಳು ಸುದ್ದಿ | Fake News ನಂಬಬೇಡಿ..ಯಾವುದೆಲ್ಲಾ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಮಳೆಗಾಲ ಬಂತೆಂದರೆ ಸಾಕು ರೋಗಗಳು ಹೆಚ್ಚಾಗಿ ಮನುಷ್ಯನ ದೇಹಕ್ಕೆ ಆವರಿಸಿಕೊಳ್ಳುತ್ತದೆ. ಮುಖ್ಯವಾಗಿ ಜ್ವರ. ಜ್ವರಗಳಲ್ಲಿ ಅನೇಕ ಮಾರಣಾಂತಿಕವಾಗಿವೆ. ಇದರಲ್ಲಿ ಡೆಂಗ್ಯೂ ಸಹ ಅವುಗಳಲ್ಲಿ ಒಂದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದಾದ್ಯಂತ ಡೆಂಗ್ಯೂ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಾಗಿದೆ ಮತ್ತು ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಹೆಚ್ಚಿನ ಅಪಾಯದಲ್ಲಿದ್ದಾರೆ. ಪ್ರತಿ ವರ್ಷ, ಜಾಗತಿಕವಾಗಿ ಸುಮಾರು 100-400 ಮಿಲಿಯನ್ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ.
ಭಾರತದಲ್ಲಿ ಮಳೆಗಾಲ ಬಂತು ಎಂದರೆ ಸಾಕು ಡೆಂಗ್ಯೂ ಕಾಲಿಡುತ್ತದೆ. ಈ ಪ್ರಕರಣಗಳು ಜುಲೈನಿಂದ ನವೆಂಬರ್ ವರೆಗೆ ಹೆಚ್ಚಾಗಿರುತ್ತದೆ. ಡೆಂಗ್ಯೂ ಎಂಬುದು ಡೆನ್-1, ಡೆನ್-2, ಡೆನ್-3 ಮತ್ತು ಡೆನ್-4 ಸೇರಿದಂತೆ ನಾಲ್ಕು ವಿಶಿಷ್ಟ ಸೆರೊಟೈಪ್ ಗಳ ಡೆಂಗ್ಯೂ ವೈರಸ್ ಗಳಿಂದ ಉಂಟಾಗುವ ಒಂದು ವೈರಲ್ ಕಾಯಿಲೆಯಾಗಿದೆ. ಇದು ಹೆಣ್ಣು ಸೊಳ್ಳೆಯ ಕಡಿತದಿಂದ ಹರಡುತ್ತದೆ. ಈ ರೋಗಕ್ಕೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಸಾವು ಸಂಭವಿಸಿದರೂ ಅದಕ್ಕೆ ಸಂಶಯವಿಲ್ಲ.
ಲಕ್ಷಣಗಳೇನು ? ಈ ರೋಗ ಹರಡುವ ಸೊಳ್ಳೆ ಕಚ್ಚಿದ 3-14 ದಿನಗಳ ನಡುವೆ ಡೆಂಗ್ಯೂವಿನ ಲಕ್ಷಣಗಳು ಪ್ರಾರಂಭವಾಗುತ್ತವೆ. ಜ್ವರ, ಸ್ನಾಯು ಮತ್ತು ಕೀಲು ನೋವು, ತಲೆನೋವು ಮತ್ತು ದದ್ದುಗಳು ಇದರ ಸಾಮಾನ್ಯ ಲಕ್ಷಣಗಳಾಗಿವೆ. ಡೆಂಗ್ಯೂವನ್ನು ಅಪಾಯಕಾರಿ ಸೋಂಕು. ಹಾಗಾಗಿ ಜನರಿಗೆ ಈ ಜ್ವರದ ಬಗ್ಗೆ ಕೆಲವೊಂದು ತಪ್ಪು ಕಲ್ಪನೆಗಳು ತುಂಬಿಕೊಂಡಿವೆ. ಹಾಗಾಗಿ ನಾವು ಇಂದು ಇಲ್ಲಿ ಕೆಲವೊಂದು ತಪ್ಪು ಕಲ್ಪನೆಗಳ ಬಗ್ಗೆ ತಿಳಿದುಕೊಳ್ಳೋಣ.
ಕಡಿಮೆ ಪ್ಲೇಟ್ ಲೆಟ್ ಗಳು ಎಂದರೆ ನಿಮಗೆ ಡೆಂಗ್ಯೂ ಇದೆ : ನಿಮಗೆ ಡೆಂಗ್ಯೂ ಇದ್ದಾಗ ಪ್ಲೇಟ್ ಲೆಟ್ ಗಳು ಕಡಿಮೆಯಾಗುತ್ತವೆ. ಆದಾಗ್ಯೂ, ದೇಹದಲ್ಲಿ ಪ್ಲೇಟ್ಲೇಟ್ ಗಳ ಸಂಖ್ಯೆ ಕಡಿಮೆ ಇದ್ದಾಗ ವ್ಯಕ್ತಿಯು ಡೆಂಗ್ಯೂ ಹೊಂದಿರಬೇಕು ಎಂಬ ಅರ್ಥವಿಲ್ಲ. ಒಬ್ಬ ವ್ಯಕ್ತಿಯು ಲೆಪ್ಪೋಸ್ಪಿರೋಸಿಸ್, ಹಳದಿ ಜ್ವರ, ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿದ್ದರೂ, ಪ್ಲೇಟ್ಲೇಟ್ ಸಂಖ್ಯೆ ಕಡಿಮೆ ಇರುವ ಸಾಧ್ಯತೆ ಇದೆ.
ಯಾವುದೇ ಸೊಳ್ಳೆ ಕಚ್ಚಿದರೆ ಡೆಂಗ್ಯೂ ಬರುತ್ತದೆ : ಡೆಂಗ್ಯೂ ಸೊಳ್ಳೆಗಳಿಂದ ಉಂಟಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಸಾಮಾನ್ಯವಾಗಿ ಯಾವುದೇ ಸೊಳ್ಳೆ ಕಚ್ಚಿದರೆ ಈ ರೋಗ ಸಂಭವಿಸುತ್ತದೆ ಎಂದು ಜನ ತಿಳಿದುಕೊಂಡಿದ್ದಾರೆ. ಆದರೆ ಅದು ಸತ್ಯವಲ್ಲ. ಹೆಣ್ಣು ಈಡಿಸ್ ಸೊಳ್ಳೆಯ ಕಡಿತದಿಂದ ಮಾತ್ರ ಡೆಂಗ್ಯೂ ಹರಡುತ್ತದೆ. ಇದಲ್ಲದೆ, ಸ್ವತಃ ಡೆಂಗ್ಯೂನಿಂದ ಬಾಧಿತರಾದರೆ ಮಾತ್ರ ಸೋಂಕನ್ನು ಹರಡಬಹುದು.
ಡೆಂಗ್ಯೂ ಜ್ವರ ಬಂದರೆ ಯಾವುದೇ ಹಾನಿಯಿಲ್ಲ : ಇತರ ರೋಗಗಳಂತೆ, ಡೆಂಗ್ಯೂ ಸೌಮ್ಯ ಮತ್ತು ತೀವ್ರ ಎರಡು ರೀತಿಯಲ್ಲೂ ಹರಡುತ್ತದೆ. ಒಬ್ಬ ವ್ಯಕ್ತಿಯು ಆರಂಭಿಕ ಹಂತದಲ್ಲಿ ಸರಿಯಾದ ಚಿಕಿತ್ಸೆಯನ್ನು ಪಡೆದರೆ, ಅದು ತೀವ್ರವಾಗಿ ಪರಿಣಾಮ ಬೀರುವುದಿಲ್ಲ. ಆದರೆ ಮತ್ತೊಂದೆಡೆ, ತಡವಾಗಿ ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆಯುವುದರಿಂದ, ಉಸಿರಾಟದ ಸಮಸ್ಯೆಗಳು, ಆಂತರಿಕ ರಕ್ತಸ್ರಾವ ಮತ್ತು ಯಕೃತ್ತಿನ ವೈಫಲ್ಯದಂತಹ ತೊಡಕುಗಳಿಗೆ ಕಾರಣವಾಗಬಹುದು. ಡೆಂಗ್ಯೂನಿಂದಾಗಿ ಕೆಲವು ಜನರು ತಮ್ಮ ಜೀವಗಳನ್ನು ಸಹ ಕಳೆದುಕೊಳ್ಳಬೇಕಾಗಬಹುದು.
ಡೆಂಗ್ಯೂ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ : ಡೆಂಗ್ಯೂ ಒಂದು ಸಾಂಕ್ರಾಮಿಕ ರೋಗ ಎಂದು ಕೆಲವರು ಹೇಳುತ್ತಾರೆ. ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹರಡುತ್ತದೆ ಎಂದು ಅವರು ಭಾವಿಸುತ್ತಾರೆ. ಆದರೆ ಅದು ಸತ್ಯವಲ್ಲ. ಡೆಂಗ್ಯೂ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುವುದಿಲ್ಲ. ಸೋಂಕಿತ ಈಡಿಸ್ ಸೊಳ್ಳೆಯು ಒಬ್ಬ ವ್ಯಕ್ತಿಯನ್ನು ಕಚ್ಚಿದಾಗ ಮಾತ್ರ ಇದು ಹರಡುತ್ತದೆ,
ಪಪ್ಪಾಯಿ ರಸವನ್ನು ಕುಡಿದರೆ ಡೆಂಗ್ಯೂ ವಾಸಿಯಾಗುತ್ತದೆ : ಈ ಜ್ವರ ಕಡಿಮೆಯಾಗಲು ಪಪ್ಪಾಯಿ ಎಲೆಯ ರಸ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ ಎಂಬುದು ನಿಜ. ಆದಾಗ್ಯೂ, ಇದು ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಔಷಧಿಗಳೊಂದಿಗೆ ಪಪ್ಪಾಯಿ ರಸವನ್ನು ಸೇವಿಸುವುದು ಆರಂಭಿಕ ಚಿಕಿತ್ಸೆಗೆ ಸಹಾಯ ಮಾಡುತ್ತದೆ, ಆದರೆ ಡೆಂಗ್ಯೂ ಕಡಿಮೆಯಾಗಲು ಅದೇ ಚಿಕಿತ್ಸೆ ಎಂದು ಹೇಳಲಾಗುವುದಿಲ್ಲ.