ಕರ್ನಾಟಕದಲ್ಲಿ ಪತ್ತೆಯಾದ ಪ್ರಕರಣ ಮಂಕಿಪಾಕ್ಸ್ ಅಲ್ಲ – ಆರೋಗ್ಯ ಸಚಿವ ಕೆ. ಸುಧಾಕರ್
ಬೆಂಗಳೂರು: ಕರ್ನಾಟಕದಲ್ಲಿ ಮೊದಲ ಮಂಕಿಪಾಕ್ಸ್ ಕೇಸ್ ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂದಿದ್ದ ಆಫ್ರಿಕಾ ಮೂಲದ ವ್ಯಕ್ತಿಯಲ್ಲಿ ಪತ್ತೆಯಾಗಿತ್ತು. ಆದರೆ, ಇದೀಗ ಆರೋಗ್ಯ ಸಚಿವ ಕೆ. ಸುಧಾಕರ್ ಇದರ ಕುರಿತು ಸ್ಪಷ್ಟಪಡಿಸಿದ್ದಾರೆ.
ಹೌದು. ಆಫ್ರಿಕಾ ಮೂಲದ ವ್ಯಕ್ತಿಗೆ ರಾಜಧಾನಿ ಬೆಂಗಳೂರಿನಲ್ಲಿ ಮಂಕಿಪಾಕ್ಸ್ ನಿನ್ನೆ ಗುಣ ಲಕ್ಷಣಗಳು ಕಂಡುಬಂದಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇಂದು ಮಂಕಿಪಾಕ್ಸ್ ನೆಗೆಟೀವ್ ಎಂದು ದೃಢಪಟ್ಟಿದ್ದು, ಅವರಿಗೆ ಚಿಕನ್ ಪಾಕ್ಸ್ ಇರುವುದು ಪತ್ತೆ ಆಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.
ಮಂಕಿಪಾಕ್ಸ್ ಇರುವ ಶಂಕೆ ವ್ಯಕ್ತವಾಗಿದ್ದ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಹಿನ್ನೆಲೆ ಪುಣೆಗೆ ರಿಪೋರ್ಟ್ ರವಾನೆ ಮಾಡಲಾಗಿತ್ತು. ಇದೀಗ ಪುಣೆಯಿಂದ ರಿಪೋರ್ಟ್ ಹೊರಬಿದ್ದಿದ್ದು, ಬೆಂಗಳೂರಿನ ವ್ಯಕ್ತಿಗೆ ಮಂಕಿಪಾಕ್ಸ್ ಇಲ್ಲವೆಂದು ದೃಢವಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
“ಬೆಂಗಳೂರಿಗೆ ಬಂದಿದ್ದ ಇಥಿಯೋಪಿಯಾ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಂಡುಬಂದಿದ್ದ ಹಿನ್ನೆಲೆಯಲ್ಲಿ ಅವರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಈಗ ಅವರ ಪರೀಕ್ಷಾ ವರದಿಯಲ್ಲಿ ಮಂಕಿಪಾಕ್ಸ್ ನೆಗಟೀವ್ ಎಂದು ಧೃಢಪಟ್ಟಿದ್ದು, ಚಿಕನ್ ಪಾಕ್ಸ್ ಇರುವುದು ಪತ್ತೆಯಾಗಿದೆ” ಎಂದು ತಿಳಿದು ಬಂದಿದೆ.
ಚಿಕನ್ ಪಾಕ್ಸ್ ಖಾಯಿಲೆ ಹಳೆಯದಾದ ಸಾಂಕ್ರಾಮಿಕ ಖಾಯಿಲೆಯಾಗಿದ್ದು, ಸಾಮಾನ್ಯವಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಇದು ವೆರೆಸೆಲ್ಲಾ ಬೋಸ್ಟರ್ ಎಂಬ ವೈರಾಣುವಿನಿಂದ ಹರಡುವ ರೋಗವಾಗಿದೆ. ಸೊಂಕು ಆಗಿರುವ ವ್ಯಕ್ತಿಯ ಗಾಯದ ಸ್ಪರ್ಶದಿಂದ ಮತ್ತು ಬಳಸಿದ ವಸ್ತುಗಳನ್ನು ಬಳಸುವುದರಿಂದ ಈ ಖಾಯಿಲೆ ಬರುತ್ತದೆ.