ಕಾಮನ್ ವೆಲ್ತ್ ಗೇಮ್ | ಭಾರತಕ್ಕೆ 4 ನೇ ಪದಕ, ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಗೆದ್ದ ಬಿಂಧ್ಯಾರಾಣಿ
ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಗೆದ್ದುಕೊಂಡಿದೆ. ವೇಟ್ ಲಿಫ್ಟರ್ ಬಿಂದ್ಯಾರಾಣಿ ದೇವಿ ಮಹಿಳೆಯರ 55 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದುಕೊಂಡಿದ್ದಾರೆ. ಬಿಂದ್ಯಾರಾಣಿ ದೇವಿ ಶನಿವಾರ ನಡೆದ ಮ್ಯಾಚ್ ನಲ್ಲಿ ಒಟ್ಟು 202ಕೆಜಿ (86ಕೆಜಿ+116ಕೆಜಿ) ಭಾರ ಎತ್ತಿ ಎರಡನೇ ಸ್ಥಾನ ಪಡೆದರು. 116 ಕೆಜಿ ಕ್ಲೀನ್ ಮತ್ತು ಜರ್ಕ್ ಲಿನ್ನೊಂದಿಗೆ ಈ ಪದಕ ಗೆದ್ದಿದ್ದು, ಇದು ಅತ್ಯುತ್ತಮ ಸಾಧನೆ ಎಂದೂ ದಾಖಲಾಯ್ತು. ನೈಜೀರಿಯಾದ ಆದಿಜತ್ ಅಡೆನಿಕೆ ಒಲರಿನೊಯ್ ಅವರು 203 ಕೆಜಿ (92 ಕೆಜಿ +111 ಕೆಜಿ) ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇಂಗ್ಲೆಂಡ್ನ ಫೇರ್ ಮಾರೊ ಅವರು ಒಟ್ಟು 198 ಕೆಜಿ (86 ಕೆಜಿ +109 ಕೆಜಿ) ಎತ್ತುವ ಮೂಲಕ ಮೂರನೇ ಸ್ಥಾನ ಪಡೆದರು.
ಈ ಮೂಲಕ ಭಾರತ ಒಂದೇ ದಿನ ಒಂದು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚು ಒಟ್ಟು 4 ಪದಕ ಗೆದ್ದು ಕೊಂಡಂತಾಗಿದೆ. ಮಾತ್ರವಲ್ಲ ನಾಲ್ಕೂ ಪದಕಗಳನ್ನು ವೇಟ್ ಲಿಫ್ಟಿಂಗ್ ನಲ್ಲೇ ಭಾರತ ಪಡೆದುಕೊಂಡಿದೆ.
ಇದಕ್ಕೂ ಮೊದಲು 55 ಕೆಜಿ ವಿಭಾಗದ ಕ್ಲೀನ್ ಆಂಡ್ ಜರ್ಕ್ ವಿಭಾಗದಲ್ಲಿ 248 ಕೆಜಿ ಭಾರ ಎತ್ತುವ ಮೂಲಕ 21 ವರ್ಷದ ಸಂಕೇತ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ಮೊದಲ ಸ್ಥಾನದಲ್ಲಿದ್ದ ಸಂಕೇತ್ ನಂತರ ಗಾಯಗೊಂಡಿದ್ದರಿಂದ ಎರಡನೇ ಸುತ್ತಿನಲ್ಲಿ ಹೆಚ್ಚು ಭಾರ ಎತ್ತಲು ಸಾಧ್ಯವಾಗದೆ ಇದ್ದಿದ್ದೂ ಚಿನ್ನದ ಪದಕ ಕೈತಪ್ಪಲು ಕಾರಣವಾಯಿತು.
ಕಾಮನ್ ವೆಲ್ತ್ ಗೇಮ್ಸ್ ನ ಪುರುಷರ 61 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಕನ್ನಡಿಗ ಗುರುರಾಜ್ ಪೂಜಾರಿ ಕಂಚಿನ ಪದಕ ಜಯಿಸಿದ್ದಾರೆ. ಈ ಮೂಲಕ ಭಾರತ ಇಂದು ಎರಡನೇ ಪದಕ ಜಯಿಸಿದೆ. ಪುರುಷರ 61 ಕೆ.ಜಿ. ವಿಭಾಗದ ವೇಟ್ಲಿಫ್ಟಿಂಗ್ನಲ್ಲಿ ಒಟ್ಟು 269 ಕೆ.ಜಿ. ಭಾರ ಎತ್ತುವ ಮೂಲಕ ಕಂಚಿನ ಪದಕ ಜಯಿಸಿದರು. ಈ ಮೊದಲು 2018ರಲ್ಲಿ ನಡೆದ ಗೋಲ್ಡ್ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಗುರುರಾಜ ಪೂಜಾರಿ ಬೆಳ್ಳಿ ಪದಕ ಜಯಿಸಿದ್ದರು.
ಗುರುರಾಜ್ ಪೂಜಾರಿ ಸ್ನಾಚ್ ನಲ್ಲಿ ಮೊದಲ ಪ್ರಯತ್ನದಲ್ಲಿ 115 ಕೆ.ಜಿ ಭಾರ ಎತ್ತಿದ್ದರು. ಎರಡನೇ ಪ್ರಯತ್ನದಲ್ಲಿ 118 ಕೆಜಿ ಭಾರ ಎತ್ತಿದರು. ಆದರೆ ಮೂರನೆ ಯತ್ನದಲ್ಲಿ 120 ಕೆ.ಜಿ. ಭಾರ ಎತ್ತಲು ವಿಫಲವಾದರು. ಇನ್ನು ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ ಗುರುರಾಜ ಪೂಜಾರಿ ಮೊದಲ ಪ್ರಯತ್ನದಲ್ಲಿ 144, ಎರಡನೇ ಪ್ರಯತ್ನದಲ್ಲಿ 148 ಹಾಗೂ ಮೂರನೇ ಪ್ರಯತ್ನದಲ್ಲಿ 151 ಕೆಜಿ ಭಾರ ಎತ್ತುವ ಕಂಚಿನ ಪದಕ ಜಯಿಸಿದರು.
ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮಹಿಳೆಯರ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಮೀರಾಬಾಯಿ ಚಾನು 88 ಕೆಜಿ ಲಿಫ್ಟ್ ಎತ್ತುವುದರೊಂದಿಗೆ ಚಿನ್ನದ ಪದಕ ಗಳಿಸಿ ಭಾರತದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ವೇಟ್ ಲಿಫ್ಟರ್ ಮೀರಾಬಾಯಿ ಚಾನು ಮಹಿಳೆಯರ 49 ಕೆಜಿ ವಿಭಾಗದಲ್ಲಿ ಒಟ್ಟು 201 ಕೆಜಿ ಎತ್ತುವ ಮೂಲಕ ಚಿನ್ನ ಗೆದ್ದು ದಾಖಲೆ ನಿರ್ಮಿಸಿದ್ದಾರೆ. ಹೌದು, ಮೀರಾಬಾಯಿ ಚಾನು ಮಹಿಳೆಯರ ವೇಟ್ ಲಿಫ್ಟಿಂಗ್ 49 ಕೆಜಿ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.