ಎರಡು ನಂಬರ್ ಪ್ಲೇಟ್ ಬಳಸಿ ದಂಡದಿಂದ ಎಸ್ಕೇಪ್ ಆಗುತ್ತಿದ್ದ ಖತರ್ನಾಕ್ ಪೊಲೀಸ್ ವಶ

ಬೆಂಗಳೂರು: ಇತ್ತೀಚೆಗೆ ನಕಲಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿಕೊಂಡು ಮೋಸ ಮಾಡುವ ಕಿರಾತಕರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಅದರಲ್ಲೂ ಸಿಲಿಕಾನ್ ಸಿಟಿ ಮುಂಚೂಣಿಯಲ್ಲಿದೆ ಎಂದೇ ಹೇಳಬಹುದು. ಬೇರೆಯವರ ನಂಬರ್ ಪ್ಲೇಟ್ ಅಳವಡಿಸಿಕೊಳ್ಳೋದು ಇಂತಹ ಪ್ರಕರಣ ಅದೆಷ್ಟೋ ಬೆಳಕಿಗೆ ಬಂದಿದೆ. ಇದೀಗ ಇದೆ ಸಾಲಿಗೆ ಸೇರಿದಂತೆ, ಬೈಕ್ ಸವಾರನೊಬ್ಬ ಬೈಕ್ ನ ಹಿಂಬದಿಯೊಂದು ಮುಂಬದಿಯೊಂದು ನಕಲಿ ನಂಬರ್ ಪ್ಲೇಟ್ ಅಳವಡಿಸಿ ಕೊಂಡಿದ್ದು, ಈತನನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

 

ಬಂಧಿತ ಆರೋಪಿ ನಂದಿನಿ ಲೇಔಟ್‌ನ ವಿಜಯಾನಂದನಗರ ನಿವಾಸಿ ಮರೀಗೌಡ (31).

ರಾಜಾಜಿನಗರ ಸಂಚಾರ ಠಾಣೆ ಹೆಡ್ ಕಾನ್‌ಸ್ಟೆಬಲ್ ಸೈಯದ್ ಅಹಮದ್, ಶುಕ್ರವಾರ ಬೆಳಗ್ಗೆ 9.25ರಲ್ಲಿ ನಂದಿನಿ ಲೇಔಟ್‌ನ ಕೂಲಿನಗರ ಮೇಲ್ ಸೇತುವೆ ಬಳಿ ಕರ್ತವ್ಯ ನಿರ್ವಹಿಸುವಾಗ ರಾಯಲ್ ಎನ್‌ಫೀಲ್ಡ್‌ನಲ್ಲಿ ಹೆಲ್ಮೆಟ್ ಇಲ್ಲದೆ ಬರುತ್ತಿದ್ದ ಸವಾರರನ್ನು ತಡೆಯಲು ಮುಂದಾಗಿದ್ದಾರೆ. ಈ ವೇಳೆ ಮರೀಗೌಡ, ಬೈಕ್ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ.

ಬಳಿಕ, ದ್ವಿಚಕ್ರ ವಾಹನದ ಮುಂದೆ ಮತ್ತು ಹಿಂದೆ ಬೇರೆ ನೋಂದಣಿ ಫಲಕ ಅಳವಡಿಸಿರುವುದು ಗಮನಿಸಿದ ಹೆಡ್ ಕಾನ್‌ಸ್ಟೆಬಲ್, ಬೆನ್ನಟ್ಟಿ ಹಿಡಿದು ವಿಚಾರಣೆಗೆ ಒಳಪಡಿಸಿದ್ದಾರೆ. ಮರೀಗೌಡ, ಬೈಕ್‌ನ ಮುಂದೆ ಅಸಲಿ ನೋಂದಣಿ ಫಲಕ (ಕೆಎ 05-ಜೆ.ಎಸ್- 7536) ಅಳವಡಿಸಿ ಹಿಂಬದಿಗೆ ನಕಲಿ ನೋಂದಣಿ ಫಲಕ(ಕೆಎ-05-ಜೆ.ಎಸ್- 7538) ಅಳವಡಿಸಿದ್ದ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಚೆಕ್ ಮಾಡಿದಾಗ ಅಸಲಿ ನೋಂದಣಿ ಫಲಕಕ್ಕೆ ಬರೋಬ್ಬರಿ 19,500 ರೂ. ಮತ್ತು ನಕಲಿ ನೋಂದಣಿ ಫಲಕಕ್ಕೆ 9,500 ರೂ. ದಂಡ ಬಾಕಿ ಇರುವುದು ಬೆಳಕಿಗೆ ಬಂದಿದೆ.

ಬಳಿಕ ಈತನ ಈ ಎರಡು ನಂಬರ್ ಪ್ಲೇಟ್ ನ ಕಾರಣ ಹೊರಬಿದ್ದಿದೆ. ಈತ ದಂಡ ವಂಚಿಸುವ ಉದ್ದೇಶದಿಂದಲೇ ಈ ಕ್ರಿಮಿನಲ್ ಮೈಂಡ್ ಬಳಸಿದ್ದ. ಈ ಕುರಿತು ನಂದಿನಿ ಲೇಔಟ್ ಠಾಣೆಗೆ ದೂರು ನೀಡಲಾಗಿದ್ದು, ಈ ಮೇರೆಗೆ ಸವಾರರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.