ಮನೆ ಬಿಟ್ಟು ಹೋದ ಮಗನಿಗೆ, ಸಾವಿನ ಸುದ್ದಿಯಾದರೂ ತಲುಪಿಸೋಣವೆಂದು ಪೋಸ್ಟರ್ | ‘ಡಿವಿ ಸದಾನಂದ ಗೌಡ ಅಂತ ಒಬ್ರು ಇದ್ರು, ಹುಡುಕಿಕೊಡಿ ‘ ಎಂಬ ಪೋಸ್ಟರ್ ವೈರಲ್ !
ಅವರ ಬಗ್ಗೆ ನಿಮಗೆ ಈಗ ಮರೆತಿರಬಹುದು. ಅವರು ಒಂದು ಕಾಲದ ಮಹಾನ್ ಹೋರಾಟಗಾರ. ಪುತ್ತೂರಿನಲ್ಲಿ ತನ್ನ ಜಾಥಾದ ಮೂಲಕವೇ ಬಿಜೆಪಿ ಪಕ್ಷದಲ್ಲಿ ಮುಂಚೂಣಿಗೆ ಬಂದ ವ್ಯಕ್ತಿ. ಹುಟ್ಟೂರು ಸುಳ್ಯದ ಮಂಡೆಕೋಲು ಗ್ರಾಮಸ್ಥ. ಮಡಿಕೇರಿಯ ಕಡೆಯಿಂದ ಮದುವೆಯಾದ ಗೃಹಸ್ಥ. ಎದುರಿಗೆ ಯಾರೇ ಸಿಕ್ಕರೂ, ತನ್ನ ಹುಳುಕು ಹಲ್ಲು ಕೂಡಾ ಕಾಣುವಂತೆ ಹಲ್ಲು ಗಿಂಜಬಲ್ಲ ಆಸಾಮಿ.
ಗೊತ್ತಾಗಿಲ್ವಾ, ಪರ್ವಾಗಿಲ್ಲ. ಇನ್ನೊಂದು ಕ್ಲೂ ನಿಮಗೆ ಕೊಡುತ್ತೇವೆ. ಈ ಕ್ಲೂ ಮಾತ್ರಾ ಖಂಡಿತಾ ಆತ ಯಾರೆಂದು ನಿಮಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ, ಜತೆಗೇ ದೇಶಕ್ಕೆ ಅವರ ವ್ಯಕ್ತಿತ್ವವನ್ನು ಜನರ ಮುಂದು ಇಟ್ಟು, ಬಿಡಿಸಿ, ಅವರ ವ್ಯಕ್ತಿತ್ವದ ‘ ಘನತೆ’ ಯನ್ನು ತೆರೆದುಬಿಡುತ್ತದೆ.
ಅದೇ, ಅವತ್ತು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಬೇಕಾಗಿ ಬಂದಾಗ, ಯಡಿಯೂರಪ್ಪನವರು ಓರ್ವ ಮನುಷ್ಯನನ್ನು ತಂದು ಮುಖ್ಯಮಂತ್ರಿ ಪದವಿಯ ಮೇಲೆ ಎತ್ತಿ ಕೂರಿಸಿದರಲ್ಲ ; ಅದೇ ಆ ಮನುಷ್ಯ ಯಡಿಯೂರಪ್ಪನವರ ಭಿಕ್ಷೆಯಿಂದ ಮುಖ್ಯಮಂತ್ರಿ ಆಗಿ ಅಧಿಕಾರ ಅನುಭವಿಸಿದ ನಂತರ ಕೆಲವೇ ತಿಂಗಳುಗಳಲ್ಲಿ ಯಡಿಯೂರಪ್ಪನವರ ಮೇಲೆ ತಿರುಗಿ ಬಿದ್ದು ವಿಶ್ವಾಸದ್ರೋಹ- ಗುರು ದ್ರೋಹ ಏಕಕಾಲದಲ್ಲಿ ನಡೆಸಿದವರಲ್ಲ, ಯೆಸ್, ಅದೇ ಸದಾನಂದ ಗೌಡ!
ಇವತ್ತು ಅವರನ್ನು ಅವರ ಹುಟ್ಟೂರಿನ ಮಂದಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹುಡುಕುತ್ತಿದ್ದಾರೆ. ಹಾಗೆ ಹುಡುಕಲು ಸಹಾಯ ಆಗಲೆಂದು ಪೋಸ್ಟರ್ ಒಂದನ್ನು ಹಂಚುತ್ತಿದ್ದಾರೆ. ನೀವೂ ಆ ಪೋಸ್ಟರ್ ನತ್ತ ಒಂದು ಸಲ ಕಣ್ಣಾಡಿಸಿ, ಅವರಿವರಿಗೆ ಕಳಿಸಿ. ಯಾಕೆಂದರೆ ಊರಿನಲ್ಲಿ ಸತ್ತ ಸುದ್ದಿಯೊಂದಿದೆ. ಅದನ್ನು ಮನೆ ಬಿಟ್ಟ ಮಗನಿಗೆ ಅರ್ಜೆಂಟಾಗಿ ಕಳಿಸಬೇಕಿದೆ!
ಮೂರು ಹಿಂದೆಯಷ್ಟೇ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾಗಿದ್ದು, ಎಲ್ಲಾ ನಾಯಕರು ಅವರ ಮನೆಗೆ ಭೇಟಿ ನೀಡಿ ನೊಂದ ಪತ್ನಿ ಮತ್ತು ಕುಟುಂಬಸ್ಥರ ಮನಸ್ಸಿಗೆ ತಮ್ಮ ಕೈಲಾದ ಸಾಂತ್ವನ ಹೇಳಿದ್ದಾರೆ.
ಆದರೆ ಸುಳ್ಯದವರೇ ಆದ ಮಾಜಿ ಮುಖ್ಯಮಂತ್ರಿ, ಡಿ.ವಿ ಸದಾನಂದ ಗೌಡರು ಬಾರದೇ ಇರುವುದು ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಪೋಸ್ಟರ್ ಒಂದು ಇದೀಗ ವೈರಲ್ ಆಗಿದೆ.
ಏನಿದೆ ಆ ಪೋಸ್ಟರ್ ನಲ್ಲಿ ?
‘ನಮ್ಮೂರಿನಲ್ಲಿ @ಡಿ.ವಿ ಸದಾನಂದ ಗೌಡ ಅಂತ ಒಬ್ರು ಇದ್ರು. ಈಗ ಅವರು ಭೂಮಿ ಮೇಲೆ ಇದ್ದಾರಾ ಯಾರಿಗಾದ್ರು ಗೊತ್ತಾ? ಯಾಕಂದ್ರೆ ಅವರ ಊರಿನಲ್ಲೇ ಒಂದು ಕೊಲೆಯಾಗಿದೆ ತಿಳಿಸಬೇಕಿತ್ತು ಅವರ ಫೋನ್ ನಂಬರ್ ಯಾರಲ್ಲಾದರೂ ಇದ್ರೆ ಕೊಡಿ, ನಾನಾದರು ಫೋನ್ ಮಾಡಿ ಹೇಳ್ತೇನೆ’ ಎನ್ನುವ ಬರವಣಿಗೆ ಇದೀಗ ಜಾಲತಾಣಗಳಲ್ಲಿ ವೈರಲ್ ಅಗುತ್ತಿದೆ.
ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಅವರ ಮನೆಗೆ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಸಚಿವರು, ಶಾಸಕರು ಹಾಗೂ ಕೆಲ ಸಂಘಟನೆಯ ಮುಖ್ಯಸ್ಥರು, ಕಾರ್ಯಕರ್ತರು ಭೇಟಿ ನೀಡಿ ಸಾಂತ್ವನ ಹೇಳಿದ್ದು, ಪರಿಹಾರವನ್ನೂ ನೀಡಿದ್ದಾರೆ.
ಆದರೆ ಬೆಳ್ಳಾರೆಯಿಂದ ಕೆಲವೇ ಕಿಲೋ ಮೀಟರುಗಳ ಹತ್ತಿರದ ಊರಿನವರಾದ ಸುಳ್ಯ ತಾಲೂಕಿನ, ಮಂಡೆಕೋಲು ಗ್ರಾಮದ ದೇವರಗುಂಡದವರಾದ ಮಾಜಿ ಮುಖ್ಯ ಮಂತ್ರಿಯಾಗಿರುವ ಡಿ.ವಿ ಸದಾನಂದ ಗೌಡರು ಬಾರದೇ ಇರುವುದು ಮತ ನೀಡಿ ಗೆಲ್ಲಿಸಿದ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಮೊನ್ನೆ ಕೆಲ ಶಾಸಕರು, ಸಂಸದರು ಬೆಂಗಳೂರಿನ ಹೊರವಲಯದಲ್ಲಿದ್ದ ಕಾರಣ ಮತ್ತು ವಿಮಾನದ ಸಮಯ ವ್ಯತ್ಯಯ ಆದ ಕಾರಣದಿಂದ ಬರುವುದು ತಡವಾಗಿತ್ತು. ಅದಕ್ಕಾಗಿ ಅವರಿಗೆ ಘೇರಾವ್ ಹಾಕಲಾಗಿತ್ತು. ಅಂತವರು ಮರುದಿನ ಹೋಗಿ ಮಾತಾಡಿ, ಬಂದಿದ್ದರು. ಹಾಗೆ ಹೋಗಿ ಬೈಸಿಕೊಂಡರೂ ಅವರ ಭೇಟಿಗೊಂದು ಅರ್ಥ ಇದೆ. ಅಲ್ಲದೆ, ನಿನ್ನೆ ಬೇರಿನ್ಯಾವುದೋ ಕ್ಷೇತ್ರದ ಯು. ಟಿ ಖಾದರ್ ಅವರು ಪ್ರವೀಣ್ ಕುಟುಂಬವನ್ನು ಭೇಟಿ ನೀಡಲು ತೆರಳಿದ್ದಾರೆ. ಆದರೆ ಮನೆಯವರು ಅವರ ಭೇಟಿಗೆ ನಿರಾಕರಿಸಿದ್ದಾರೆ. ಮನೆ ಬಾಗಿಲಿಗೆ ಬಂದವರನ್ನು ಭೇಟಿ ಮಾಡದೆ ಕಳಿಸಬಾರದಿತ್ತು ಅನ್ನುವ ಅಭಿಪ್ರಾಯವೂ ಇದೆ. ಆದರೆ ಸ್ವಂತ ಊರಿನಲ್ಲಿ ಹುಟ್ಟಿ ಬೆಳೆದ ಮರ ಯಾವುದಕ್ಕೂ ಉಪಯೋಗಕ್ಕೆ ಇಲ್ಲದಂತಾಗಿದೆ. ಮನೆ ಬಿಟ್ಟು ಹೋದ ಮಗನಿಗೆ, ಊರಿನ ಸಾವಿನ ಸುದ್ದಿಯಾದರೂ ತಲುಪಿಸೋಣವೆಂದು ಈಗ ಪೋಸ್ಟರ್ ಹಾಕಲಾಗಿದೆ.