ಎಲ್ಲ ಜನಸಾಮಾನ್ಯರಿಗೆ ರಕ್ಷಣೆ ನೀಡಲು ಸಾಧ್ಯವೇ, ತೇಜಸ್ವಿ ಸೂರ್ಯ ಹೇಳಿಕೆ ಅಪ್ರಬುದ್ಧತೆಯನ್ನು ತೋರಿಸುತ್ತಿದೆ – ಯು.ಟಿ. ಖಾದರ್ ಅವರು ಆಕ್ರೋಶ

ಎಲ್ಲ ಜನಸಾಮಾನ್ಯರಿಗೆ ರಕ್ಷಣೆ ನೀಡಲು ಸಾಧ್ಯವೇ? ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ನೀಡಿರುವ ಹೇಳಿಕೆಯು ಅವರ ಅಪ್ರಬುದ್ಧತೆಯನ್ನು ತೋರಿಸುತ್ತಿದೆ ಎಂದು ವಿಧಾನಸಭೆಯ ಕಾಂಗ್ರೆಸ್ ಉಪನಾಯಕ ಯು.ಟಿ. ಖಾದರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಯು.ಟಿ. ಖಾದರ್ ಅವರು, ಸಮಾಜದಲ್ಲಿರುವ ಸರಿಸುಮಾರು ಶೇಕಡ ಒಂದರಷ್ಟಿರುವ ಘಾತುಕ ಶಕ್ತಿಗಳನ್ನ ಮಟ್ಟಹಾಕಿದರೆ ಬಾಕಿ ಇರುವ ಶೇಕಡಾ 99 ರಷ್ಟು ಜನರಲ್ಲಿ ಧೈರ್ಯ ಹಾಗೂ ವಿಶ್ವಾಸ ಮೂಡಲಿದೆ. ಅದನ್ನ ಬಿಟ್ಟು ಭದ್ರತೆ ನೀಡಲು ಸಾಧ್ಯವೇ ಎಂದು ತೇಜಸ್ವಿ ಆಡಳಿತ ಪಕ್ಷದವರಾಗಿಯೇ ಪ್ರಶ್ನಿಸುತ್ತಾರೆ. ಇದು ನಿಮ್ಮ ಅಸಮರ್ಥತೆ ಹಾಗೂ ಅಸಹಾಯಕತೆಯನ್ನ ತೋರಿಸುತ್ತಿದೆ. ಜನ ಇದೆಲ್ಲವನ್ನೂ ಗಮನಿಸುತ್ತಿದ್ದಾರೆ ನೆನಪಿರಲಿ, ಎಂದು ಯು ಟಿ ಖಾದರ್ ಕಿಡಿಕಾರಿದ್ದಾರೆ.

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ತೇಜಸ್ವಿ ಸೂರ್ಯ ಅವರು,
ಪ್ರತಿಯೊಬ್ಬರಿಗೂ ರಕ್ಷಣೆ ನೀಡುವುದಕ್ಕೆ ಆಗುತ್ತಾ ಎಂದು ತೇಜಸ್ವಿ ಸೂರ್ಯ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಯಾರೋ ಒಬ್ಬ ಮತಾಂಧ ದಾರಿಯಲ್ಲಿ ಹೋಗುವವರಿಗೆ ಚಾಕು ಚುಚ್ಚಿದರೆ ಸೆಕ್ಯೂರಿಟಿ ನೀಡೋಕಾಗುತ್ತಾ? ಎಂದು ಪ್ರಶ್ನಿಸಿದ್ದರು. ಇದೀಗ ತೇಜಸ್ವಿ ಸೂರ್ಯ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಯು ಟಿ ಖಾದರ್ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave A Reply