ಒಂದೇ ಒಂದು ಸುಳ್ಳು ಹೇಳಿ ಮದುವೆ ಮಾಡಿಸಿದರೂ ಇನ್ನು ಮುಂದೆ ಜೈಲು ಶಿಕ್ಷೆ ಗ್ಯಾರಂಟಿ!!!
ಒಂದು ಮಾತಿತ್ತು, ಮನೆಕಟ್ಟಿ ನೋಡು, ಮದುವೆ ಮಾಡಿ ನೋಡು ಎಂದು. ಅದರಲ್ಲೂ, ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿ ಎಂಬ ಮಾತು ಚಾಲ್ತಿಯಲ್ಲಿತ್ತು. ಆದರೀಗ ಇನ್ನು ಮುಂದೆ ಒಂದೇ ಒಂದು ಸುಳ್ಳು ಹೇಳಿ ಮದುವೆ ಮಾಡಿದ್ರೆ ಜೈಲು ಕಂಬಿ ಎಣಿಸಬೇಕಾಗುತ್ತದೆ.
ಸರ್ಕಾರ ನಿಗದಿಪಡಿಸಿದ ವಯಸ್ಸಿಗಿಂತ ಮೊದಲೇ ಅಪ್ರಾಪ್ತರಿಗೆ ಮದುವೆ ಮಾಡಿಸಿದರೆ ಕೇಸು ಬೀಳುವುದು ಖಂಡಿತ.
ಯಾರಿಗೆಲ್ಲಾ ಗೊತ್ತೇ ? ಕಲ್ಯಾಣ ಮಂದಿರಗಳ ಮಾಲೀಕರು, ಆಡಳಿತ ಮಂಡಳಿ, ಮದುವೆ ಮಾಡಿಸುವ ಅರ್ಚಕರು, ಆಮಂತ್ರಣ ಪತ್ರಿಕೆ ಮುದ್ರಣ ಮಾಡಿಕೊಡುವ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಸೇರಿದಂತೆ ಅಪ್ರಾಪ್ತರ ಮದುವೆಗೆ ಸಹಕಾರ ನೀಡುವ ಪ್ರತಿಯೊಬ್ಬರ ಮೇಲೂ ಕೇಸು ಹಾಕಿ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಎಷ್ಟೇ ಕ್ರಮಗಳನ್ನು ಕೈಗೊಂಡರೂ ಬಾಲ್ಯವಿವಾಹವನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಇನ್ಮುಂದೆ ಬಾಲ್ಯವಿವಾಹ ನಡೆಯುವ ಕಲ್ಯಾಣ ಮಂದಿರ, ದೇವಸ್ಥಾನಗಳ ಸಮಿತಿ ಪ್ರಮುಖರು, ವಿವಾಹ ಮಾಡಿಸುವ ಅರ್ಚಕರು, ಆಮಂತ್ರಣ ಪತ್ರಿಕೆ ಮುದ್ರಿಸುವವರ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯಲ್ಲಿ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.