ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, NIA ತನಿಖೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಆದೇಶ
ಸುಳ್ಯ ತಾಲ್ಲೂಕು ಬೆಳ್ಳಾರೆ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯ ಹೊಣೆಯ ಕುರಿತು ಮಹತ್ವದ ನಿರ್ಧಾರವೊಂದನ್ನು ರಾಜ್ಯ ಸರಕಾರ ತೆಗೆದುಕೊಂಡಿದೆ. ಪ್ರವೀಣ್ ನೆಟ್ಟಾರು ಹತ್ಯೆಯ ಹೊಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲಾಗಿದೆ. ಈ ಪ್ರಕರಣವು ಅಂತರರಾಜ್ಯ ನಂಟು ಹೊಂದಿರುವ ಹಿನ್ನೆಲೆಯಲ್ಲಿ ತನಿಖೆಯ ಹೊಣೆಯನ್ನು ಎನ್‌ಐಎಗೆ ವಹಿಸಲು ಕರ್ನಾಟಕ ಸರ್ಕಾರವು ತೀರ್ಮಾನ ಮಾಡಿದೆ. ಈ ಕುರಿತು ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಂಡಿದ್ದಾರೆ.
ದಕ್ಷಿಣ ಕನ್ನಡ ಮತ್ತು ಕೇರಳ ಗಡಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಕುರಿತು ಚರ್ಚಿಸಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ದಕ್ಷಿಣ ಕನ್ನಡ ಜಿಲ್ಲೆಗೆ ರಾಜ್ಯ ಮೀಸಲು ಪಡೆಯ (KSRP) ಬೆಟಾಲಿಯನ್ ನಿಯೋಜಿಸಲಾಗುವುದು. ಸೂಕ್ಷ್ಮ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಫಾಜಿಲ್ ಕೊಲೆ ಪ್ರಕರಣದ ತನಿಖೆಗೂ ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿದೆ. ಆ ಪ್ರಕರಣದ ತನಿಖೆಯೂ ಚುರುಕಾಗಿದೆ ಎಂದರು. ಶೀಘ್ರದಲ್ಲೇ ಎಲ್ಲ ಸಮುದಾಯದ ಮುಖಂಡರ ಜತೆ ಶಾಂತಿ ಸಭೆ ನಡೆಸಿ, ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ ಮಾಡುತ್ತೇವೆ ಎಂದು ಸಿಎಂ ಹೇಳಿದ್ದಾರೆ.
ಭಯೋತ್ಪಾದಕ ಕೃತ್ಯಗಳ ತನಿಖೆಯ ಹೊಣೆಯನ್ನು ಅದರ ತೀವ್ರತೆ ವಿಶ್ಲೇಷಿಸಿ ಎನ್‌ಐಎಗೆ ವಹಿಸುವುದು ವಾಡಿಕೆ. 2008ರಲ್ಲಿ ಮುಂಬೈ ಮೇಲೆ ಭಯೋತ್ಪಾದಕರ ದಾಳಿಯ ನಂತರ ಎನ್‌ಐಎ ರಚಿಸಲಾಯಿತು. ಭಯೋತ್ಪಾದನಾ ಪ್ರಕರಣಗಳ ತ್ವರಿತ ತನಿಖೆ ಮತ್ತು ಭಯೋತ್ಪಾದಕರ ಮೇಲೆ ಕಣ್ಣಿಡುವುದು ಎನ್‌ಐಎ ಸಿಬ್ಬಂದಿಯ ಮುಖ್ಯ ಜವಾಬ್ದಾರಿ.