ಪ್ರವೀಣ್ ನೆಟ್ಟಾರ್ ಪ್ರಕರಣವನ್ನು NIA ಗೆ ವಹಿಸುತ್ತಾ ಕೇಂದ್ರ ? ಅಮಿತ್ ಶಾಗೆ ಶೋಭಾ ಕರಂದ್ಲಾಜೆ ಬರೆದ ಪತ್ರದಲ್ಲಿ ಏನಿದೆ ?
ದಕ್ಷಿಣ ಕನ್ನಡ ಜಿಲ್ಲೆ ಬಹುಶಃ ನಿನ್ನೆ ಅಕ್ಷರಶಃ ಬೆಂಕಿಯಂತಾಗಿತ್ತು. ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಎಲ್ಲಿ ನೋಡಿದರೂ ಹಿಂದೂ ಕಾರ್ಯಕರ್ತರ ಕೂಗು, ಆವೇಶ ಎಲ್ಲೆ ಮೀರಿತು. ಒಂದು ಕಡೆ ತಮ್ಮ ನೆಚ್ಚಿನ ನಾಯಕನ ಸಾವು, ಇನ್ನೊಂದು ಕಡೆ ತಾವೇ ಆಯ್ಕೆ ಮಾಡಿ ಕಳಿಸಿದ ಜನಪ್ರತಿನಿಧಿಗಳ ನೀರಸ ಪ್ರತಿಕ್ರಿಯೆ. ಈಗ ಕೇಂದ್ರ ಕೃಷಿ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಈ ಹತ್ಯೆಯ ಕುರಿತು ತನಿಖೆ ನಡೆಸುವಂತೆ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಈ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವಂತೆ ಕೋರಿದ್ದಾರೆ.
ಜು.26 ರ ರಾತ್ರಿ ದುಷ್ಕರ್ಮಿಗಳು ಬಿಜೆಪಿ ಮುಖಂಡ ಪ್ರವೀಣ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರೆಲ್ಲರೂ ರಾಜೀನಾಮೆ ನೀಡಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ರ ಬರೆದ ಅವರು ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ್ದಾರೆ.
ಘಟನೆ ಹಿನ್ನೆಲೆ
ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿರುವ ಅಕ್ಷಯ ಚಿಕನ್ ಸೆಂಟರ್ ಮಾಲಕ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಎಂಬವರ ಮೇಲೆ ದುಷ್ಕರ್ಮಿಗಳಿಬ್ಬರು ಕತ್ತಿಯಿಂದ ಕಡಿದ ಪರಿಣಾಮ ತೀವ್ರ ಗಾಯಗೊಂಡಿರುವ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆತರುತ್ತಿದ್ದ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಜು.26ರಂದು ರಾತ್ರಿ 8.20 ರಿಂದ 8.45ರ ನಡುವೆ ಈ ಘಟನೆ ನಡೆದಿದೆ.ಪ್ರವೀಣ್‌ರವರು ತನ್ನ ಅಂಗಡಿಯಲ್ಲಿ ಕುಳಿತುಕೊಂಡಿದ್ದ ವೇಳೆ ಕೆಎಲ್ ನಂಬರಿನ ಬೈಕ್‌ನಲ್ಲಿ ಬಂದಿದ್ದ ಈರ್ವರು ದುಷ್ಕರ್ಮಿಗಳು ಅಲ್ಲಿಗೆ ಬಂದಿದ್ದರು.ಇದನ್ನು ಗಮನಿಸಿದ ಪ್ರವೀಣ್‌ರವರು ತಪ್ಪಿಸಿಕೊಳ್ಳಲೆಂದು ಪಕ್ಕದ ಅಂಗಡಿಗೆ ಹೋಗುತ್ತಿದ್ದ ವೇಳೆಯೇ ಹಿಂದಿನಿಂದ ಬಂದು ಅವರ ತಲೆಗೆ ತಲವಾರಿನಿಂದ ಕಡಿದು ಪರಾರಿಯಾಗಿದ್ದಾರೆ.
ಇದರಿಂದಾಗಿ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರವೀಣ್‌ರವರನ್ನು ಕೂಡಲೇ ಅಲ್ಲಿಂದ ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆಂದು ಕರೆ ತರುತ್ತಿದ್ದ ವೇಳೆ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಈ ಘಟನೆ ಯಾಕಾಗಿ ನಡೆಯಿತು ಎಂಬುದು ನಿಗೂಢವಾಗಿದೆಯಾದರೂ ಕೆಲ ದಿನಗಳ ಹಿಂದೆ ಕಳೆಂಜ ವಿಷ್ಣುನಗರದಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಈ ಕೃತ್ಯ ಎಸಗಲಾಗಿದೆ ಎಂದು ಸುದ್ದಿ ಹರಡಿದೆ. ಘಟನೆಯಿಂದಾಗಿ ಬೆಳ್ಳಾರೆಯಲ್ಲಿ ತುಸು ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಈಗಾಗಲೇ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.